ಮೈಸೂರಿನಲ್ಲಿ ನಡೆಯಲಿದೆ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ

ಹೊಸದಿಗಂತ ವರದಿ, ಮೈಸೂರು:

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್‌ನ ಸಮನ್ವಯ ಸಮಿತಿಯ ಮೊದಲ ಸಭೆಯ ಅರಮನೆ ನಗರಿ ಮೈಸೂರಿನಲ್ಲಿ ಮಾ.೨೭ ರಂದು ನಡೆಯಲಿದೆ.

ಅಂದು ಮಧ್ಯಾಹ್ನ ೪ರ ವೇಳೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿಜೆಪಿ ನಾಯಕರು, ಶಾಸಕರು, ಚುನಾವಣೆಯ ಉಸ್ತುವಾರಿಗಳು ಸ್ಥಳೀಯ ಮುಖಂಡರು ಹಾಗೂ ಜೆಡಿಎಸ್‌ನ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕೋರ್ ಕಮಿಟಿಯ ಅಧ್ಯಕ್ಷರಾದ ಶಾಸಕ ಜಿ.ಟಿ.ದೇವೇಗೌಡ, ಹರೀಶ್‌ಗೌಡ, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರಾದ ಸಾ.ರಾ.ಮಹೇಶ್, ಕೆ.ಮಹದೇವ್ ಸೇರಿದಂತೆ ಪಕ್ಷದ ಹಲವು ನಾಯಕರು, ಮುಖಂಡರುಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಲೋಕಸಭೆ ಚುನಾವಣೆಯನ್ನು ಜಂಟಿಯಾಗಿ ಎದುರಿಸುವ ಕುರಿತು ಚರ್ಚೆ ನಡೆಸಿ, ಕಾರ್ಯತಂತ್ರಗಳನ್ನು ನಡೆಸಲಿದ್ದಾರೆ. ಅಲ್ಲದೇ ಇದೇ ವೇಳೆ ಉಭಯ ಪಕ್ಷಗಳು ಸೇರಿ ಸಮನ್ವಯ ಸಮಿತಿಯನ್ನು ರಚಿಸಲಿದ್ದಾರೆ. ಬಳಿಕ ಸಂಜೆ ೬ರ ವೇಳೆ ನಗರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಸಮಾವೇಶ ನಡೆಯಲಿದೆ.

ಬಿಜೆಪಿಯಿಂದ ಒಂದುವರೆ ಸಾವಿರ, ಜೆಡಿಎಸ್‌ನಿಂದ ಸುಮಾರು ೨ ಸಾವಿರ ಮಂದಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಎರಡು ಪಕ್ಷಗಳ ನಾಯಕರು, ಮುಖಂಡರುಗಳು ಉಪಸ್ಥಿತರಿದ್ದು, ಚುನಾವಣೆಯ ರಣ ಕಹಳೆಯನ್ನು ಜಂಟಿಯಾಗಿ ಮೊಳಗಿಸಲಿದ್ದಾರೆ. ಅಲ್ಲದೆ ಕಾರ್ಯಕರ್ತರಿಗೆ ಮಾರ್ಗದರ್ಶನವನ್ನು ಮಾಡಲಿದ್ದಾರೆ ಎಂದು ಬಿಜೆಪಿ ಮೈಸೂರು ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್.ನಾಗೇಂದ್ರ ಮಂಗಳವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಬುಧವಾರ ಬೆಳಗ್ಗೆ ೮ ಗಂಟೆಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು, ರಾಜ್ಯದಲ್ಲಿ ತಲೆದೋರಿರುವ ಬರಗಾಲವನ್ನು ನಿವಾರಿಸಿ, ಉತ್ತಮ ಮಳೆಯಾಗಿ, ಕುಡಿಯುವ ನೀರಿನ ಸಂಕಷ್ಟದ ಪರಿಸ್ಥಿತಿಯನ್ನು ನಿವಾರಿಸಿಕೊಡು ತಾಯಿ ಎಂದು ವಿಶೇಷ ಪೂಜೆಯನ್ನು ಸಲ್ಲಿಸಲಿದ್ದಾರೆ. ಬಳಿಕ ಗೋವುಗಳ ಪೂಜೆ ನೆರವೇರಿಸಿ, ಮಡಕೇರಿಗೆ ತೆರಳಿ, ಅಲ್ಲಿ ಬಿಜೆಪಿವತಿಯಿಂದ ಆಯೋಜಿಸಲಾಗಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನದ ವೇಳೆಗೆ ಮೈಸೂರಿಗೆ ಆಗಮಿಸಿ, ಬಿಜೆಪಿ-ಜೆಡಿಎಸ್ ಮೈತ್ರಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಲೋಕಸಭೆಗೆ ಎರಡು ಪಕ್ಷಗಳು ಮೈತ್ರಿಯಾಗಿ ಸೀಟು ಹಂಚಿಕೆಯಾದ ಬಳಿಕ ಮೊದಲ ಬಾರಿಗೆ ಸಭೆಯನ್ನು ನಡೆಸಲಾಗುತ್ತಿದೆ. ಇದು ಬಿಜೆಪಿಗೆ ಮತ್ತಷ್ಟು ಆನೆ ಬಲ ಬಂದoತಾಗಿದೆ. ಎರಡು ಪಕ್ಷಗಳಲ್ಲಿ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡುವ ಮೂಲಕ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಗೆಲುವಿಗೆ ಶ್ರಮಿಸಲಿದ್ದಾರೆ. ಜೆಡಿಎಸ್‌ನ ಮಾಜಿ ಸಚಿವರೂ ಆದ ಸಾ.ರಾ.ಮಹೇಶ್ ಅವರು ಈಗಾಗಲೇ ಪಕ್ಷದೊಂದಿಗೆ ಕೈಜೋಡಿಸಿದ್ದಾರೆ. ಶಾಸಕರಾದ ಜಿ.ಟಿ.ದೇವೇಗೌಡ, ಹರೀಶ್‌ಗೌಡರು ಈಗಾಗಲೇ ನಮ್ಮ ಅಭ್ಯರ್ಥಿಯ ಪರ ಪ್ರಚಾರ ಕಾರ್ಯವನ್ನು ನಡೆಸಿದ್ದಾರೆ. ಪಿರಿಯಾಪಟ್ಟಣದ ಮಾಜಿ ಶಾಸಕ ಕೆ.ಮಹದೇವ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಸೇರಿದಂತೆ ಜೆಡಿಎಸ್ ನಾಯಕರು, ಮುಖಂಡರು ಕೂಡ ಪ್ರಚಾರದ ಅಖಾಡಕ್ಕೆ ಇಳಿಯುವುದರಿಂದ ಚುನಾವಣೆಯನ್ನು ಒಟ್ಟಾಗಿ ಎದುರಿಸಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಆಪರೇಷನ್ ಮಾಡುವುದಿಲ್ಲ
ನಾವು ಬೇರೆ ಪಕ್ಷಗಳಲ್ಲಿನ ಮುಖಂಡರು, ನಾಯಕರನ್ನು ಪಕ್ಷಕ್ಕೆ ಕರೆದುಕೊಳ್ಳುವುದಕ್ಕೆ ಯಾವುದೇ ರೀತಿಯ ಆಪರೇಷನ್ ಮಾಡುವುದಿಲ್ಲ, ಅದರ ಅಗತ್ಯವೂ ನಮಗೆ ಇಲ್ಲ. ಈಗಾಗಲೇ ಹಲವಾರು ಬೇರೆ ಪಕ್ಷದ ಮುಖಂಡರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ನೂರಾರು ಮಂದಿ ಬೇರೆ ಪಕ್ಷದ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹಾಗಾಗಿ ಎಲ್ಲೋ ನಾಲ್ಕೈದು ಮಂದಿ ಅಸಮಾಧಾನಿತರು ನಮ್ಮ ಪಕ್ಷವನ್ನು ಬಿಟ್ಟು ಹೋದರೆ ಅದರಿಂದ ಪಕ್ಷಕ್ಕೆ ಯಾವುದೇ ತೊಂದರೆಯಿಲ್ಲ, ಹಾನಿಯೂ ಇಲ್ಲ, ಪಕ್ಷದಿಂದ ಹೊರ ಹೋಗುವವರ ಬಗ್ಗೆ ನಾವು ಯಾವುದೇ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನಮ್ಮ ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಅವರನ್ನು ನಾವು ಸ್ವಾಗತಿಸಿ ಬರಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇoದ್ರ, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ನಗರಪ್ರಧಾನಕಾರ್ಯದರ್ಶಿಗಳಾದ ಗಿರಿಧರ್, ಕೇಬಲ್ ಮಹೇಶ್, ಕೊಡಗು ಜಿಲ್ಲಾಧ್ಯಕ್ಷ ರಾಬೀನ್ ದೇವಯ್ಯ, ಮುಖಂಡ ರಾಜೇಂದ್ರ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!