ಹೊಸದಿಗಂತ ವರದಿ,ಮೈಸೂರು:
ವರ ಇನ್ನೇನು ತನಗೆ ತಾಳಿ ಕಟ್ಟಬೇಕು ಎನ್ನುವಾಗ ವಧು ತನಗೆ ಮದುವೆ ಬೇಡ ಎಂದು ಹೈಡ್ರಾಮ ನಡೆಸಿ, ಮದುವೆ ನಿಲ್ಲಿಸಿದ ಘಟನೆ ಮೈಸೂರಿನಲ್ಲಿ ಭಾನುವಾರ ನಡೆದಿದೆ.
ನಗರದ ಸುಣ್ಣದ ಕೇರಿಯ ನಿವಾಸಿ ಸಿಂಚನ ಎಂಬಾಕೆಯೊoದಿಗೆ ಎಚ್.ಡಿ. ಕೋಟೆ ತಾಲ್ಲೂಕಿನ ಗ್ರಾಮವೊಂದರ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಲಾಗಿತ್ತು. ಇಂದು
ನಗರದ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಗಳೆಲ್ಲವೂ ನಡೆಯುತ್ತಿದ್ದವು. ಅಲ್ಲಿಯ ತನಕ ಮೌನವಾಗಿದ್ದ ವಧು ಸಿಂಚನ ವರ ತಾಳಿ ಕಟ್ಟುವ ಸಮಯದಲ್ಲಿ ತಲೆ ಸುತ್ತಿ ಬಿದ್ದಿದ್ದಾಳೆ.
ನಂತರ ತಾನು ಈ ಮದುವೆ ಆಗುವುದಿಲ್ಲ. ಬದಲಿಗೆ ಮನೆಯ ಪಕ್ಕದ ಹುಡುಗನನ್ನು ಪ್ರೀತಿ ಮಾಡುತ್ತಿದ್ದು, ಆತನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದಿದ್ದಾಳೆ. ಪೋಷಕರು, ಸಂಬoಧಿಕರು ಮನವೊಲೈಸುವ ಪ್ರಯತ್ನ ನಡೆಸಿದರೂ, ಒಪ್ಪದ ಆಕೆ. ವರನೊಂದಿಗೆ ಮದುವೆಯಾಗುವುದಿಲ್ಲ ಎಂದು ಪಟ್ಟು ಹಿಡಿದಳು. ಇದರಿಂದ ವರನ ಕಡೆಯವರು ಇದರಿಂದ ಕೋಪಗೊಂಡು ವಧು ಕಡೆಯವರಿಗೆ ಛೀಮಾರಿ ಹಾಕಿದ್ದಾರೆ. ಜೊತೆಗೆ ಮದುವೆಗೆ ಈಗಾಗಲೇ ಸುಮಾರು 5 ಲಕ್ಷ ರೂ. ಖರ್ಚು ಮಾಡಿದ್ದು, ಹಣ ವಾಪಸ್ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೆ.ಆರ್.ಠಾಣೆಯ ಪೊಲೀಸರು ವಧುವನ್ನು ಪೊಲೀಸ್ ಠಾಣೆಗೆ ಕರೆದೊಯ್ಯಯ್ದು ವಿಚಾರಣೆ ನಡೆಸಿದರು. ವಧುವಿಗೆ ಬುದ್ದಿವಾದ ಹೇಳಿದರು. ಆದರೂ ಆಕೆ ಕೇಳಲಿಲ್ಲ. ಪ್ರೀತಿಸಿದವನೊಂದಿಗೆ ನಾನು ಮದುವೆಯಾಗುವುದು ಎಂದು ಖಡಾ ಖಂಡಿತವಾಗಿ ಹೇಳಿಬಿಟ್ಟಳು.