ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪರ್ಯಾಯ ಭೂ ಮಂಜೂರಾತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ರಾಜ್ಯಪಾಲ ತವರ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಜೆ ಸಚಿವ ಸಂಪುಟದ ವಿಶೇಷ ಸಭೆ ಕರೆದಿದ್ದರು. ಆದರೆ ಕೆಲವು ಕಾರಣಗಳಿಂದ ವಿಶೇಷ ಸಚಿವ ಸಂಪುಟ ಸಭೆ ರದ್ದುಗೊಳಿಸಲಾಗಿದೆ. ಸಂಜೆ 5 ಗಂಟೆಗೆ ನಿಗದಿಯಾಗಿದ್ದ ಸಂಪುಟ ಸಭೆ ರದ್ದಾಗಿದೆ.
ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಿದ್ದಂತೆ ಗೃಹ ಕಛೇರಿ ಕೃಷ್ಣಾದಲ್ಲಿ ಮುಂದಿನ ಕಾನೂನು ಹೋರಾಟದ ಕುರಿತು ಮುಖ್ಯಮಂತ್ರಿಗಳು ಸರಣಿ ಸಭೆಯನ್ನು ನಡೆಸಿ ಚರ್ಚೆ ನಡೆಸಿದರು. ಭೈರತಿ ಸುರೇಶ್ ಸೇರಿದಂತೆ ಹಲವು ಸಚಿವರು ಗೃಹ ಕಛೇರಿಗೆ ಆಗಮಿಸಿ ಇದು ಪ್ರತಿಪಕ್ಷಗಳ ಷಡ್ಯಂತ್ರವಾಗಿದ್ದು, ಕಾನೂನು ಹೋರಾಟದಲ್ಲಿ ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಸಿದ್ದರಾಮಯ್ಯಗೆ ಭರವಸೆ ನೀಡುತ್ತಿದ್ದರು.
ಎಐಸಿಸಿ ನಾಯಕರಿಂದ ಕರೆ ಬಂದ ನಂತರ ಸಿಎಂ ಸಂಪುಟ ಸಭೆಯನ್ನು ರದ್ದುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.