ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಮತ್ತೆ ಟೊಮೆಟೋ ಬೆಲೆ ದರವನ್ನು ಸತತವಾಗಿ ಇಳಿಸುತ್ತಿದೆ. ಸದ್ಯ 50 ರುಪಾಯಿಗೆ ಮಾರಾಟ ಮಾಡಲಾಗುತ್ತಿದ್ದು, ಮುಂಬರುವ ಭಾನುವಾರದಿಂದ (ಆಗಸ್ಟ್ 20) ಇನ್ನೂ ಕಡಿಮೆ ಬೆಲೆಗೆ ಮಾರಲು ನಿರ್ಧರಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ಎನ್ಸಿಸಿಎಫ್ ಮತ್ತು ಎನ್ಎಫ್ಇಡಿ ಸಂಸ್ಥೆಗಳಿಗೆ ಕಿಲೋಗೆ 40 ರೂ ದರದಲ್ಲಿ ಟೊಮೆಟೋವನ್ನು (Tomato) ಮಾರುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸೂಚಿಸಿದೆ.
ಇವೆರಡೂ ಸಂಸ್ಥೆಗಳು ತಮ್ಮ ವಿವಿಧ ಮಳಿಗೆಗಳಲ್ಲಿ ಮತ್ತು ಮೊಬೈಲ್ ವಾಹನಗಳಲ್ಲಿ ಟೊಮೆಟೋ ಹಣ್ಣನ್ನು ಜನಸಾಮಾನ್ಯರಿಗೆ ಮಾರಾಟ ಮಾಡುತ್ತಾ ಬಂದಿದೆ.
ಕಳೆದ ತಿಂಗಳು ಭಾರತದಲ್ಲಿ ಟೊಮೆಟೋ ಹಣ್ಣಿನ ಬೆಲೆ 200 ರೂ ದಾಟಿ ಹೋದಾಗ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಟೊಮೆಟೋ ಮಾರಲು ಮುಂದಾಯಿತು.
ಎನ್ಸಿಸಿಎಫ್ ಮತ್ತು ಎನ್ಎಎಫ್ಇಡಿ ಸಂಸ್ಥೆಗಳು ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ಟೊಮೆಟೋ ಖರೀದಿಸಿ, ಅತಿಹೆಚ್ಚು ಬೆಲೆ ಇರುವ ಪ್ರದೇಶಗಳಲ್ಲಿ ರಿಯಾಯಿತಿ ದರದಲ್ಲಿ ಅದನ್ನು ಮಾರಾಟ ಮಾಡುತ್ತಿದೆ. ಸುಮಾರು 15 ಲಕ್ಷ ಕಿಲೋನಷ್ಟು ಟೊಮೆಟೋವನ್ನು ವಿವಿಧ ಮಂಡಿಗಳಿಂದ ಇವು ಸಂಗ್ರಹಿಸಿ ದೇಶಾದ್ಯಂತ ಅಗತ್ಯ ಪ್ರದೇಶಗಳಲ್ಲಿ ವಿತರಿಸುತ್ತಿದೆ.ಈಗ ಟೊಮೆಟೋ ಬೆಲೆ ಸತತವಾಗಿ ಇಳಿಕೆಯಾಗುತ್ತಿರುವುದರಿಂದ ಅದಕ್ಕೆ ಅನುಗುಣವಾಗಿ ಸರ್ಕಾರವೂ ಬೆಲೆ ಕಡಿಮೆ ಮಾಡುತ್ತಿದೆ.