ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ಸಂಪುಟವು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್‌ಗೆ ಸಮ್ಮತಿ ಸೂಚಿಸಿದೆ.
ದೇಶದ ಇಂಧನ ಬೇಡಿಕೆ ಪೂರೈಸುವ ದೃಷ್ಟಿಯಲ್ಲಿ ಹಾಗೂ ಪರಿಸರ ಸಂರಕ್ಷಣೆ ಉದ್ದೇಶದಿಂದ ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್‌ಅನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಪ್ರಧಾನಿ ಮೋದಿ ಅವರು 2021ರ ಸ್ವಾತಂತ್ರ್ಯ ದಿನದ ಭಾಷಣದ ವೇಳೆ ಘೋಷಿಸಿದ್ದರು.
ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್,ಮಾಹಿತಿ ನೀಡಿದರು. ‘ದೇಶದಲ್ಲಿ 2030ರ ವೇಳೆಗೆ ವಾರ್ಷಿಕ 50 ಲಕ್ಷ ಮೆಟ್ರಿಕ್ ಟನ್ ಗ್ರೀನ್ ಹೈಡ್ರೋಜನ್ ಉತ್ಪಾದನೆ ಮಾಡುವ ಗುರಿಯೊಂದಿಗೆ ಮಿಷನ್‌ಅನ್ನು ಘೋಷಿಸಲಾಗಿದೆ’ ಎಂದರು. ಆರಂಭಿಕ ಹಂತದಲ್ಲಿ 19,744 ಕೋಟಿ ರೂ. ವ್ಯಯಿಸಲಾಗುತ್ತದೆ.
ಅದೇ ರೀತಿ ಗ್ರೀನ್ ಹೈಡ್ರೋಜನ್ ಮಿಷನ್‌ಗೆ 8 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ. ಇದರಿಂದ 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಪಳೆಯುಳಿಕೆ ಇಂಧನದ ಆಮದು ಪ್ರಮಾಣ ಒಂದು ಲಕ್ಷ ಕೋಟಿ ರೂಪಾಯಿಂತ ಹೆಚ್ಚು ಕಡಿತವಾಗಲಿದೆ. ಹಾಗೆಯೇ, ಹಸಿರುಮನೆ ಅನಿಲ ಸೋರಿಕೆಯು ವಾರ್ಷಿಕ 50 ದಶಲಕ್ಷ ಮೆಟ್ರಿಕ್ ಟನ್ ಇಳಿಕೆಯಾಗಲಿದೆ’ ಎಂದು ಮಾಹಿತಿ ನೀಡಿದರು.
ಗ್ರೀನ್ ಹೈಡ್ರೋಜನ್?
ಗ್ರೀನ್ ಹೈಡ್ರೋಜನ್ ಎಂಬುದು ಪರ್ಯಾಯ ಇಂಧನವಾಗಿದೆ. ಇದನ್ನು ನವೀಕರಿಸಬಹುದಾದ ಇಂಧನದ ಮೂಲಗಳಿಂದ ಉತ್ಪಾದಿಸಲಾಗುತ್ತದೆ. ವಿದ್ಯುತ್ ಬಳಕೆ ಮೂಲಕ ನೀರಿನಿಂದ ಆಮ್ಲಜನಕವನ್ನು ಬೇರ್ಪಡಿಸಿ ಗ್ರೀನ್ ಹೈಡ್ರೋಜನ್‌ಅನ್ನು ಪಡೆಯಲಾಗುತ್ತದೆ. ಇದನ್ನು ಗ್ಯಾಸ್ ಹಾಗೂ ನೈಸರ್ಗಿಕ ಅನಿಲ ಪೈಪ್‌ಲೈನ್ ಮೂಲಕ ಪೂರೈಕೆ ಮಾಡಬಹುದಾಗಿದೆ. ಉತ್ಪಾದನೆ, ಆಹಾರ ಸಂಸ್ಕರಣೆ, ಸಾಗಣೆಗೆ ಇದನ್ನು ಬಳಸಬಹುದಾಗಿದೆ.