ಗಡಿ ಕಿರಿಕ್ ಮಾಡುವ ಚೀನಾ ವಿರುದ್ಧ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ: ಮೂರು ಐಟಿಬಿಪಿ ಪಡೆ ನಿಯೋಜನೆಗೆ ಅಸ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಜೊತೆಗೆ ಗಡಿ ಕಿರಿಕ್ ಮಾಡುತ್ತಿರುವ ಚೀನಾ ವಿರುದ್ಧ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.

ಅರುಣಾಚಲ ಪ್ರದೇಶದ ಭಾರತ – ಚೀನಾ ಗಡಿಯಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್​ನ (ಐಟಿಬಿಪಿ) ಹೆಚ್ಚುವರಿ ಮೂರು ಬೆಟಾಲಿಯನ್‌ಗಳನ್ನು ನಿಯೋಜಿಸಲು ಗೃಹ ಇಲಾಖೆ ಅನುಮೋದನೆ ನೀಡಿದೆ. ಜೊತೆಗೆ ಸೂಕ್ಷ್ಮ ಗಡಿ ವಲಯದಲ್ಲಿ ಹೆಚ್ಚುವರಿ ಪೋಸ್ಟ್​ಗಳನ್ನೂ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.

ಫೆಬ್ರವರಿಯಲ್ಲಿ 7 ಹೆಚ್ಚುವರಿ ಬೆಟಾಲಿಯನ್‌ಗಳ ನಿಯೋಜನೆಗೆ ಐಟಿಬಿಪಿ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹೊಸದಾಗಿ ಮಂಜೂರಾದ ಏಳು ಬೆಟಾಲಿಯನ್‌ಗಳಲ್ಲಿ ಮೂರು ಪಡೆಗಳನ್ನು ಈಗ ನಿಯೋಸಿಲು ಸಿದ್ಧತೆ ನಡೆಸಲಾಗಿದೆ.

ಭಾರತ ಮತ್ತು ಚೀನಾ ನಡುವೆ ಒಟ್ಟು 3,488 ಕಿಮೀ ಗಡಿ ಹೊಂದಿದೆ. ಇದರಲ್ಲಿ ಅರುಣಾಚಲ ಪ್ರದೇಶವು 1,126 ಕಿಮೀ ಗಡಿ ಇದ್ದರೆ, ಜಮ್ಮು ಮತ್ತು ಕಾಶ್ಮೀರ 1,597 ಕಿಮೀ, ಹಿಮಾಚಲ ಪ್ರದೇಶ 200 ಕಿಮೀ, ಉತ್ತರಾಖಂಡ 345 ಕಿಮೀ ಮತ್ತು ಸಿಕ್ಕಿಂ 220 ಕಿಮೀ ಗಡಿಯನ್ನು ಹಂಚಿಕೊಂಡಿವೆ. ಚೀನಾದ ಉಪಟಳವನ್ನು ತಡೆದು ಭಾರತದ ಗಡಿ ಕಾಪಾಡುತ್ತಿರುವ ಐಟಿಬಿಪಿ ಪಡೆ ಇದುವರೆಗೆ ಪೂರ್ವ ವಲಯದಲ್ಲಿ (ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ) ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ 67 ಗಡಿ ಪೋಸ್ಟ್​ಗಳನ್ನು ಹೊಂದಿದೆ. ಪಶ್ಚಿಮ ವಲಯದಲ್ಲಿ (ಜಮ್ಮು ಮತ್ತು ಕಾಶ್ಮೀರ) 35 ಪೋಸ್ಟ್​, ಮಧ್ಯಮ ವಲಯದಲ್ಲಿ (ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್) 71 ಔಟ್​ಪೋಸ್ಟ್​ಗಳನ್ನು ಹೊಂದಿದೆ.

ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಸಂಪರ್ಕಕ್ಕೆ ಉತ್ತೇಜನ ನೀಡುವ ಸಲುವಾಗಿ ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ 678 ಕೋಟಿ ರೂಪಾಯಿ ವೆಚ್ಚದಲ್ಲಿ ನೈಜ ನಿಯಂತ್ರಣ ರೇಖೆಯ (ಎಲ್​ಎಸಿ) ಉದ್ದಕ್ಕೂ 8 ರಸ್ತೆಗಳನ್ನು ನಿರ್ಮಿಸಲಾಗಿದೆ. ನಾಳೆ (ಮಂಗಳವಾರ) ಈ ಎಲ್ಲ ಯೋಜನೆಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ. ಕಮೆಂಗ್ ಜಿಲ್ಲೆಯ ಬಲಿಪರಾ-ಚಾರ್ದುವಾರ್ – ತವಾಂಗ್ (ಬಿಸಿಟಿ) ಆಯಕಟ್ಟಿನ ಪ್ರವೇಶದಲ್ಲಿ ನಿರ್ಮಿಸಲಾದ ನೆಚಿಪು ಸುರಂಗವನ್ನೂ ಉದ್ಘಾಟಿಸಲಿದ್ದಾರೆ. ಇದು ಗಡಿ ಪ್ರದೇಶಗಳಲ್ಲಿ ಸೈನಿಕರು ಮತ್ತು ಜನರ ತ್ವರಿತ ಸಂಚಾರಕ್ಕೆ ಅನುಕೂಲವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!