ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ನ ಶಾಹಿ ಪರಿವಾರವು ಕಾಂಗ್ರೆಸ್ಗೆನೇ ಓಟು ನೀಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ರಾಜಸ್ಥಾನದ ಜಲೋರ್ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಸ್ವಾತಂತ್ರ್ಯದ ನಂತರ ಶಾಹಿ ರಾಜಮನೆತನವು ದೆಹಲಿಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಗೆ ಮತ ಹಾಕದಂತಹ ಸ್ಥಿತಿ ಬಂದಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಶಾಹಿ ರಾಜಮನೆತನದವರೇ ಕಾಂಗ್ರೆಸ್ಗೆ ಮತ ಹಾಕದಿದ್ದಾಗ ನಿಮ್ಮ ಮತ ಕೇಳಲು ಅವರಿಗೆ ಯಾವ ಹಕ್ಕಿದೆ. ಈ ರಾಜಮನೆತನ ವಾಸಿಸುವ ಕ್ಷೇತ್ರದಲ್ಲೇ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ನ ನಾಯಕರೇ ಮನೆಮನೆಗೆ ತೆರಳಿ ಕಾಂಗ್ರೆಸ್ಗೆ ಮತ ಹಾಕಬೇಡಿ ಎಂದು ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ನ ಸದ್ಯದ ಪರಿಸ್ಥಿತಿ ಆಗಿದೆ. ಈ ರೀತಿಯ ಪಕ್ಷದ ಮೇಲೆ ಹೇಗೆ ಭರವಸೆ ಇಡಲು ಸಾಧ್ಯ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.
ಒಂದು ಕಾಲದಲ್ಲಿ 400 ಸ್ಥಾನ ಗಳಿಸಿದ್ದ ಪಕ್ಷ ಈಗ 300ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವುದು ವಿಪರ್ಯಾಸ. ಸೋಲಿನ ಭಯದಿಂದ ಸೋನಿಯಾ ಗಾಂಧಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಭಾರತ ಮೈತ್ರಿಕೂಟದಲ್ಲಿರುವ ಪಕ್ಷಗಳು ಪರಸ್ಪರ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈ ಪಕ್ಷಗಳು ಹೆಸರಿಗೆ ಮಾತ್ರ ಮೈತ್ರಿ ಮಾಡಿಕೊಂಡಿವೆ ಎಂದು ಹರಿಹಾಯ್ದಿದ್ದಾರೆ.