ಪಕ್ಷದ ಗೀತೆಯಿಂದ ‘ಜೈ ಭವಾನಿ’ ಪದ ತೆಗೆಯಲು ಆಯೋಗ ಸೂಚನೆ: ಇದು ಮಹಾರಾಷ್ಟ್ರಕ್ಕೆ ಮಾಡಿದ ಅವಮಾನ ಎಂದ ಉದ್ಧವ್ ಠಾಕ್ರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಸೇನೆ (ಯುಬಿಟಿ) ಪಕ್ಷದ ಹೊಸ ಗೀತೆಯಿಂದ ‘ಜೈ ಭವಾನಿ’ ಮತ್ತು ‘ಹಿಂದೂ’ ಪದಗಳನ್ನು ತೆಗೆದುಹಾಕುವಂತೆ ಕೇಂದ್ರ ಚುನಾವಣಾ ಆಯೋಗದಿಂದ (ಇಸಿಐ) ನೊಟೀಸ್ ನೀಡಿದ್ದು, ಆದ್ರೆ ನಾವು ಸೂಚನೆಯ್ನು ಪಾಲಿಸುವುದಿಲ್ಲ ಎಂದು ಮಹಾರಾಷ್ಟ್ರದ ಶಿವಸೇನೆ (ಯುಬಿಟಿ) ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

ಮುಂಬೈನಲ್ಲಿ ಭಾನುವಾರ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ಹೊಸ ಚುನಾವಣಾ ಚಿಹ್ನೆಯಾದ ‘ಮಶಾಲ್’ (ಉರಿಯುವ ಜ್ಯೋತಿ)ಅನ್ನು ಜನಪ್ರಿಯಗೊಳಿಸಲು ಗೀತೆಯನ್ನು ರಚಿಸಲಾಗಿದೆ. ಆದರೆ, ಇದಲ್ಲಿರುವ ‘ಹಿಂದು’ ಮತ್ತು ‘ಜೈ ಭವಾನಿ’ ಪದಗಳನ್ನು ತೆಗೆದುಹಾಕಲು ಚುನಾವಣೆ ಆಯೋಗ ಸೂಚಿಸಿದೆ. ನಮ್ಮ ಗೀತೆಯಿಂದ ‘ಜೈ ಭವಾನಿ’ ಪದವನ್ನು ತೆಗೆದುಹಾಕುವಂತೆ ಹೇಳುವುದು ಮಹಾರಾಷ್ಟ್ರಕ್ಕೆ ಮಾಡಿದ ಅವಮಾನವಾಗಿದೆ ಎಂದು ಕಿಡಿಕಾರಿದರು.

ಛತ್ರಪತಿ ಶಿವಾಜಿ ಮಹಾರಾಜರು ತುಳಜಾ ಭವಾನಿ ದೇವಿಯ ಆಶೀರ್ವಾದದೊಂದಿಗೆ ಹಿಂದವಿ ಸ್ವರಾಜ್​ ಸ್ಥಾಪಿಸಿದ್ದರು. ನಾವು ದೇವಿ ಅಥವಾ ಹಿಂದೂ ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿಲ್ಲ. ಆದರೆ, ‘ಜೈ ಭವಾನಿ’ ಪದವನ್ನು ತೆಗೆದುಹಾಕುವಂತೆ ಹೇಳುವುದು ಅವಮಾನವಾಗಿದೆ. ನಾವು ಇದನ್ನು ಸಹಿಸುವುದಿಲ್ಲ ಎಂದು ಠಾಕ್ರೆ ಹೇಳಿದರು.

ಜೊತೆಗೆ ನಮ್ಮ ಸಾರ್ವಜನಿಕ ಸಭೆಗಳಲ್ಲಿ ‘ಜೈ ಭವಾನಿ’ ಮತ್ತು ‘ಜೈ ಶಿವಾಜಿ’ ಎಂದು ಹೇಳುವ ರೂಢಿಯನ್ನು ಮುಂದುವರೆಸುವುದಾಗಿ ಉದ್ಧವ್​ ಸ್ಪಪ್ಟಪಡಿಸಿದರು. ಈ ವಿಷಯವಾಗಿ ಚುನಾವಣಾ ಆಯೋಗವು ನಮ್ಮ ವಿರುದ್ಧ ಕ್ರಮ ಕೈಗೊಂಡರೆ, ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ‘ಜೈ ಬಜರಂಗ ಬಲಿ’ ಅಂತಾ ಹೇಳಿ ಇವಿಎಂ ಬಟನ್ ಒತ್ತಿ ಎಂದು ಹೇಳಿದಾಗ ಚುನಾವಣಾ ಆಯೋಗ ಏನು ಮಾಡಿತ್ತು ಎಂಬುದನ್ನು ನಮಗೆ ತಿಳಿಸಬೇಕಾಗುತ್ತದೆ ಎಂದು ಉದ್ಧವ್​ ಸವಾಲು ಹಾಕಿದರು.

ಅಯೋಧ್ಯೆಯಲ್ಲಿ ರಾಮಲಲಾನ ದರ್ಶನವನ್ನು ಉಚಿತವಾಗಿ ಪಡೆಯಲು ಬಿಜೆಪಿಗೆ ಮತ ಹಾಕುವಂತೆ ಅಮಿತ್​ ಶಾ ಜನರಿಗೆ ಕರೆ ನೀಡಿದ್ದರು. ಅಲ್ಲದೇ, ಕಾನೂನುಗಳನ್ನು ಏನಾದರೂ ಬದಲಾಯಿಸಲಾಗಿದೆಯೇ ಮತ್ತು ಈಗ ಧರ್ಮದ ಹೆಸರಿನಲ್ಲಿ ಮತ ಕೇಳುವುದು ಸರಿಯೇ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ. ನಮ್ಮ ಪತ್ರಕ್ಕೆ ಚುನಾವಣಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಷ್ಟೇ ಅಲ್ಲ, ಕಾನೂನನ್ನು ಬದಲಾಯಿಸಿದ್ದರೆ ನಮ್ಮ ಚುನಾವಣಾ ಸಭೆಗಳಲ್ಲಿ ನಾವು ‘ಹರ್ ಹರ್ ಮಹಾದೇವ್’ ಎಂದು ಹೇಳುತ್ತೇವೆ ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದೇವೆ ಅಂತಾ ಉದ್ಧವ್​ ಠಾಕ್ರೆ ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!