ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್-ಹಮಾಸ್ ನಡುವಿನ ಯುದ್ಧ ನಡೆಯುತ್ತಿದ್ದು, ಪ್ಯಾಲಸ್ತೀನ್‌ಗೆ ತಮ್ಮ ಬೆಂಬಲ ಸೂಚಿಸಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ʻಮತ ಓಲೈಕೆಗಾಗಿ ದೇಶ ಒಡೆಯುವ ಯಾವ ಅವಕಾಶವನ್ನೂ ಕಾಂಗ್ರೆಸ್ ಪಕ್ಷ ಬಿಡೋದಿಲ್ಲʼ ಎಂದು ವಾಗ್ದಾಳಿ ನಡೆಸಿದರು.
ಈ ವಿಚಾರ ಕುರಿತಂತೆ ಟ್ವೀಟ್ ಮಾಡಿರುವ ಕಟೀಲ್, ʻಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯನ್ನು ಖಂಡಿಸದೇ ಭಯೋತ್ಪಾದಕರ ಪರ ತಮಗಿರುವ ನಿಲುವನ್ನು ಕಾಂಗ್ರೆಸ್ ಮತ್ತೊಮ್ಮೆ ಎತ್ತಿ ತೋರಿಸಿದೆ. ಕಾಶ್ಮೀರದಲ್ಲಿ ಪಾಕಿಸ್ತಾನಿ ಉಗ್ರರಿಗೆ ಮಂಡಿಯೂರಿದ್ದ ಕಾಂಗ್ರೆಸ್, ನಾಳೆ ಲಷ್ಕರ್, ಐಸಿಸ್ ಉಗ್ರರನ್ನು ಬೆಂಬಲಿಸಿದರೂ ಆಶ್ಚರ್ಯವಿಲ್ಲ ಎಂದರು. ಒಂದು ಮತದ ಓಲೈಕೆಗಾಗಿ ದೇಶ ಒಡೆಯುವ ಯಾವ ಅವಕಾಶವನ್ನೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಇಸ್ರೇಲ್-ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಭಾರತ ಇಸ್ರೇಲ್ ಪರ ನಿಂತಿದ್ದರೆ, ಕಾಂಗ್ರೆಸ್ ಮಾತ್ರ ಹಮಾಸ್ ವಿರುದ್ಧದ ಇಸ್ರೇಲ್ ಪ್ರತಿದಾಳಿಗೆ ಅಸಮಾಧಾನ ಹೊರಹಾಕಿದೆ.