April 10, 2026
Friday, April 10, 2026
spot_img

ದೇಶದ ಮೊದಲು, ವಿಶ್ವದ ಎರಡನೇ…ಬ್ರಹ್ಮಪುತ್ರ ನದಿಯಲ್ಲಿ ಅವಳಿ ಸಂಪರ್ಕ ಸುರಂಗಕ್ಕೆ ಕೇಂದ್ರ ಸರ್ಕಾರ ಅಸ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ರಸ್ತೆ ಮತ್ತು ರೈಲ್ವೆ ಸುರಂಗ ನಿರ್ಮಾಣ ಮಾಡಲು ಇಂದು ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಈ ಮೂಲಕ ಅವಳಿ ರಸ್ತೆ ಮತ್ತು ರೈಲು ಸುರಂಗವು ಅಸ್ಸಾಂನ ಗೋಹ್ಪುರ್ ಮತ್ತು ನುಮಲಿಗಢ ನಡುವೆ ಸಂಪರ್ಕ ಸಾಧಿಸಲಿದೆ.

ಇದು ದೇಶದ ಮೊದಲ ಮತ್ತು ವಿಶ್ವದ ಎರಡನೇ ನೀರೊಳಗಿನ ಅವಳಿ ಸಂಪರ್ಕ ಸುರಂಗವಾಗಲಿದ್ದು, 34 ಕಿಮೀ ಉದ್ದವಿರಲಿದ್ದು,ಒಟ್ಟು 18,662 ಕೋಟಿ ರೂಪಾಯಿ ಖರ್ಚಾಗುವ ಸಾಧ್ಯತೆ ಇದೆ.

ಈ ಕುರಿತು ಮಾಹಿತಿ ನೀಡಿದ ರೈಲ್ವೆ ಖಾತೆ ಸಚಿವೆ ಅಶ್ವಿನಿ ವೈಷ್ಣವ್, ದೇಶದಲ್ಲಿ ಮೊದಲ ನದಿಯೊಳಗಿನ ಸುರಂಗವನ್ನು ಕೋಲ್ಕತ್ತಾದಲ್ಲಿನ ಹೂಗ್ಲಿ ನದಿಯಲ್ಲಿ ನಿರ್ಮಿಸಲಾಗಿದೆ. ಅಹಮದಾಬಾದ್ – ಮುಂಬೈ ಬುಲೆಟ್ ರೈಲು ಯೋಜನೆಗಾಗಿ ಮೊದಲ ಸಮುದ್ರದೊಳಗಿನ ಸುರಂಗದ ಕೆಲಸ ನಡೆಯುತ್ತಿದೆ. ಹೂಗ್ಲಿ ನದಿಯಲ್ಲಿ ಸುರಂಗ ನಿರ್ಮಾಣ ಮೆಟ್ರೋ ಸಂಚಾರಕ್ಕಾಗಿ ಉದ್ದೇಶಿಸಲಾಗಿದೆ. ಇದೀಗ, ಗೋಹ್ಪುರ್ – ನುಮಲಿಗಢ ಯೋಜನೆಯು ಅವಳಿ ಸುರಂಗವಾಗಲಿದೆ. ಇದರಲ್ಲಿ ರೈಲು ಮತ್ತು ರಸ್ತೆ ಸಾರಿಗೆ ಎರಡೂ ಅಕ್ಕಪಕ್ಕದಲ್ಲಿ ಸಾಗಲಿದೆ ಎಂದು ತಿಳಿಸಿದರು.

ಇದು ದೇಶದ ಮೊದಲ ಮತ್ತು ವಿಶ್ವದ ಎರಡನೆಯ ನೀರೊಳಗಿನ ರಸ್ತೆ ಕಮ್ ರೈಲು ಸುರಂಗವಾಗಲಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಇತರ ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡಲಿದೆ. ಸರಕು ಸಾಗಣೆ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಅದರ ವೆಚ್ಚವೂ ಕಡಿಮೆಯಾಗಲಿದೆ. ಸಾಮಾಜಿಕ- ಆರ್ಥಿಕ ಬೆಳವಣಿಗೆಗೆ ಇಂಬು ನೀಡಲಿದೆ ಎಂದರು.

ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಾದ NH-15 ಮತ್ತು NH-715 ಮತ್ತು ಎರಡು ರೈಲ್ವೆ ಮಾರ್ಗಗಳಾದ ಗೋಹ್ಪುರ್ ಬದಿಯಲ್ಲಿರುವ ರಂಗಿಯಾ – ಮುಕೊಂಗ್ಸೆಲೆಕ್ ರೈಲ್ವೆ ವಿಭಾಗ ಮತ್ತು ನುಮಲಿಗಢ ಬದಿಯಲ್ಲಿರುವ ಫರ್ಕೇಟಿಂಗ್-ಮರಿಯಾನಿ ಲೂಪ್ ಲೈನ್ ವಿಭಾಗವನ್ನು ಜೋಡಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !