ಕೃಷಿಕರ ಮೊರೆ ಆಲಿಸಿದ ನ್ಯಾಯಾಲಯ: ಚುನಾವಣೆ ವೇಳೆ 9 ಮಂದಿಯ ಕೋವಿ ಠೇವಣಾತಿಗೆ ವಿನಾಯಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚುನಾವಣೆಯ ಸಂದರ್ಭದಲ್ಲಿ ಕೋವಿ ಠೇವಣಿ ಇಡುವ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸ್ಕ್ರೀನಿಂಗ್ ಸಮಿತಿ ಕೃಷಿಕರಿಗೆ ಸರಿಯಾದ ರೀತಿಯಲ್ಲಿ ವಿನಾಯಿತಿ ನೀಡದ ಹಿನ್ನಲೆಯಲ್ಲಿ ಜಿಲ್ಲೆಯ 9 ಮಂದಿ ಕರ್ನಾಟಕ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ಸೂಚನೆಯಂತೆ ಜಿಲ್ಲಾಡಳಿತ ವಿನಾಯಿತಿ ನೀಡಿದೆ.

ಪ್ರತಿ ಚುನಾಣೆಯ ಸಂದರ್ಭ ತಿಂಗಳುಗಟ್ಟಲೆ ಕೋವಿ ಠೇವಣಿ ಇಡುವುದರಿಂದ ಕಾಡು ಪ್ರಾಣಿಗಳಿಂದ ಬೆಳೆ ನಾಶವಾಗುತ್ತದೆ ಎಂಬ ವಿನಾಯಿತಿ ಮನವಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳ ನೇತೃತ್ವದ ಸ್ಕ್ರೀನಿಂಗ್ ಸಮಿತಿ, ಕೇವಲ 19 ಮಂದಿಯ ಅರ್ಜಿಯನ್ನು ಮಾತ್ರ ಪುರಸ್ಕರಿಸಿ ವಿನಾಯಿತಿ ನೀಡಿತ್ತು.

ಚುನಾವಣಾ ಆಯೋಗ ಕೃಷಿಕರಿಗೆ ವಿನಾಯಿತಿ ಆದೇಶ ಮಾಡಿದರೂ, ಸ್ಕ್ರೀನಿಂಗ್ ಸಮಿತಿ ಅರ್ಜಿದಾರರು ಸಲ್ಲಿಸಿದ ಯಾವ ವಿಚಾರವನ್ನೂ ಪರಿಗಣಿಸದೆ ಸಾರಾಸಗಟಾಗಿ ತಿರಸ್ಕಾರ ಮಾಡಿದ್ದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನಿಂದ ಪುರುಷೋತ್ತಮ ಗೌಡ, ಜಯಪ್ರಸಾದ್, ಬಂಟ್ವಾಳ ತಾಲೂಕಿನಿಂದ ಎಂ. ಗೋವಿಂದ ಭಟ್, ನಿಶಾಂತ ನಾರಾಯಣ, ಸುದರ್ಶನ್ ಕುಮಾರ್ ಮುಳಿಯ, ಎ. ಮೋಹನ ಮೈರ, ಎನ್. ವಶಿಷ್ಠ ಭಟ್, ಎಂ. ಕೃಷ್ಣರಾಜ್, ಗಿರಿಜಶಂಕರ್ ಕೆ. ಒಟ್ಟು ಐದು ದಾವೆಯನ್ನು ಹೂಡಿದ್ದರು.

ದಾವೆ ಪುರಸ್ಕರಿಸಿದ ನ್ಯಾಯಮೂರ್ತಿಗಳು, ಕೃಷಿಕರಿಗೆ ಆಗುವ ಸಮಸ್ಯೆಗಳಿಗೆ ಹೊಣೆ ಯಾರೆಂದು ಉತ್ತರಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತಲ್ಲದೆ, ಸೂಕ್ತ ಕ್ರಮವನ್ನು ಕೈಗೊಳ್ಳದೇ ಹೋದಲ್ಲಿ ಅಗತ್ಯ ಕ್ರಮವನ್ನು ನ್ಯಾಯಾಲಯ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿತ್ತು. ಇದಾಗುತ್ತಿದ್ದಂತೆ ದ.ಕ. ಜಿಲ್ಲೆಯ ಸ್ಕ್ರೀನಿಂಗ್ ಸಮಿತಿ ಏ.2ರಂದು ಸಭೆಯನ್ನು ನಡೆಸಿ 9 ಮಂದಿ ಅರ್ಜಿಯನ್ನು ಮರು ಪರಿಶೀಲನೆ ನಡೆಸಿ ವಿನಾಯಿತಿಯನ್ನು ನೀಡಿ ಆದೇಶ ಹೊರಡಿಸಿದೆ.

ಉಚ್ಛ ನ್ಯಾಯಾಲಯದಲ್ಲಿ ವಕೀಲರಾದ ಸುಬ್ರಹ್ಮಣ್ಯ ಭಟ್ ಎಂ., ರವಿಶಂಕರ ಶಾಸ್ತ್ರಿ ಜಿ., ಕೆ. ರವಿಶಂಕರ್, ಕೆ. ಶ್ರೀಹರಿ ಕೃಷಿಕರ ಸಮಸ್ಯೆಯ ಬಗ್ಗೆ ನ್ಯಾಯಮೂರ್ತಿಗಳ ಗಮನ ಸೆಳೆಯುವ ಕಾರ್ಯ ಮಾಡಿದರು. ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸಚಿನ್ ಶಂಕರ್ ಮಗದುಮ್ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರಕ್ಕೆ ಛೀಮಾರಿ ಹಾಕುವ ಜತೆಗೆ, ಭವಿಷ್ಯದ ದೃಷ್ಠಿಯಿಂದ ಸರಿಯಾದ ಆದೇಶವನ್ನು ಹೊರಡಿಸುವುದಾಗಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತ, ಅಡಿಕೆ, ತೆಂಗು ಮುಂತಾದವು ಮುಖ್ಯ ಬೆಳೆಯಾಗಿದ್ದು, ಪ್ರಸ್ತುತ ಭತ್ತದ ಬೆಳೆ ಇರುವುದಿಲ್ಲ. ಅಡಿಕೆ ಮತ್ತು ತೆಂಗಿನ ಬೆಳೆಗೆ ಸಾಮಾನ್ಯವಾಗಿ ಮಂಗಳ ಕಾಟ ಇರುವುದರಿಂದ ಶಸ್ತ್ರಾಸ್ತ್ರವನ್ನೇ ಬಳಸಲು ಅವಶ್ಯಕತೆ ಕಂಡು ಬಂದಿರುವುದಿಲ್ಲ ಎಂದು ಕೃಷಿಕರ ಬಂದೂಕಿಗೆ ವಿನಾಯಿತಿಯನ್ನು ನೀಡದೆ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಎಲ್ಲಾ ಅರ್ಜಿಗಳನ್ನು ತಿರಸ್ಕಾರ ಮಾಡುವ ಬಗ್ಗೆ ಮಾ.18ರಂದೇ ಜಿಲ್ಲಾಡಳಿತ ಹೇಳಿಕೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!