ಹೊಸದಿಗಂತ ವರದಿ, ಚಿತ್ರದುರ್ಗ :
ಪತ್ನಿಯ ಶೀಲ ಶಂಕಿಸಿ ಕೊಲೆಗೈದ ಹಂತಕನಿಗೆ ಚಿತ್ರದುರ್ಗದ ೧ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಚಿತ್ರದುರ್ಗ ನಗರದ ಜೋಗೇಶಪಾಳ್ಯ ನಿವಾಸಿ ಆಟೋ ಚಾಲಕ ಇಸ್ಮಾಯಿಲ್ ಜಬೀವುಲ್ಲಾ ಶಿಕ್ಷೆಗೊಳಗಾದ ಅಪರಾಧಿ. ಈತ ತನ್ನ ಪತ್ನಿ ಸೈಯದ್ ಮುಬಾರಕ್ ಉನ್ನಿಸಾ ಅವರನ್ನು ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ.
ಇದೇ ವಿಚಾರಕ್ಕೆ ಆಗಾಗ ಪತ್ನಿಯ ಜೊತೆ ಜಗಳ ಮಾಡುತ್ತಿದ್ದ. ಸೈಯದ್ ಮುಬಾರಕ್ ಉನ್ನಿಸಾ ಅವರ ಅಣ್ಣ ಸೈಯದ್ ಸಿಗ್ಬತ್ ಉಲ್ಲಾ ರಾಜಿ ಮಾಡಿ ಇಬ್ಬರೂ ಪರಸ್ಪರ ಹೊಂದಿಕೊಂಡು ಬದುಕು ನಡೆಸುವಂತೆ ಬುದ್ದಿ ಹೇಳಿದ್ದರು.
೨೦೨೨ ಫೆಬ್ರವರಿ ೧೩ ರಂದು ನಸುಕಿನ ೩ ಗಂಟೆ ಸಮಯದಲ್ಲಿ ಮನೆಯಲ್ಲಿ ಇಸ್ಮಾಯಿಲ್ ಜಬೀವುಲ್ಲಾ ಪತ್ನಿ ಸೈಯದ್ ಮುಬಾರಕ್ ಉನ್ನಿಸಾ ಜೊತೆಗೆ ಜಗಳ ತೆಗೆದು ಹೊಡೆಯಲಾರಂಭಿಸಿದ. ಇದರಿಂದ ಕಂಗಾಲಾದ ಮುಬಾರಕ್ ಉನ್ನಿಸಾ ಮನೆಯಿಂದ ಹೊರಗೆ ಓಡಿ ಬಂದರು. ಹೀಗೆ ಬಂದ ಆಕೆಯನ್ನು ಇಸ್ಮಾಯಿಲ್ ಜಬೀವುಲ್ಲಾ ರಸ್ತೆಯಲ್ಲಿ ಸಿಕ್ಕಿದ ಇಟ್ಟಿಗೆಯಿಂದ ಹೊಡೆದಿದ್ದ. ಗಂಡನ ಹಲ್ಲೆಯಿಂದ ಆಕೆ ಮೃತಪಟ್ಟಿದ್ದಳು.
ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಪಿಐ ಎಂ.ಎಸ್.ರಮೇಶ್ ರಾವ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ೧ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಯಿತು. ಹಾಗಾಗಿ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕನಿ ಆರೋಪಿ ಇಸ್ಮಾಯಿಲ್ ಜಬೀವುಲ್ಲಾಗೆ ೩೫ ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿ ಈಗಾಗಲೇ ೨ ವರ್ಷ ೪ ತಿಂಗಳು ಜೈಲಿನಲ್ಲಿ ಕಳೆದಿದ್ದು, ಉಳಿದಂತೆ ಜೀವಾವಧಿ ಶಿಕ್ಷೆ ಅನುಭವಿಸಲು ತಿಳಿಸಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (ಸರ್ಕಾರದಿಂದ) ಕಲಂ ೩೫೭(ಬಿ) ಅಡಿಯಲ್ಲಿ ಬರುವ ಪರಿಹಾರವನ್ನು ಮೃತಳ ತಾಯಿ ಸೈಯದ್ ಅಕ್ತರುನ್ನಿಸಾ ಮತ್ತು ಮೃತ ಸೈಯದ್ ಮುಬಾರಕ್ ಉನ್ನಿಸಾ ಅವರ ಮೂರು ಪುಟ್ಟ ಮಕ್ಕಳಿಗೆ ನೀಡಲು ಕಾನೂನು ಪ್ರಾಧಿಕಾರಕ್ಕೆ ಆದೇಶಿಸಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕ ಎನ್.ಎಸ್.ಮಲ್ಲಯ್ಯ ವಾದ ಮಂಡಿಸಿದ್ದರು.