Sunday, August 14, 2022

Latest Posts

ಫುಟ್​ಪಾತ್​ ನಲ್ಲಿ ಪತ್ತೆಯಾಯಿತು ಯುವ ವೈದ್ಯೆಯ ಮೃತದೇಹ: ಸಾವಿನ ಕಾರಣ ನಿಗೂಢ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಹಾಗೂ ಸ್ತ್ರೀರೋಗ ತಜ್ಞ ಡಾ. ಪ್ರವೀಣ್ ಚಂದ್ರ ಹೆಂಡ್ರೆ ಅವರ ಪುತ್ರಿಯ ಮೃತದೇಹ ಭಾನುವಾರ ಫುಟ್​ಪಾತ್​ ಪತ್ತೆಯಾಗಿದೆ.
ಮೃತರನ್ನು ತಾರಾಬಾಯಿ ಪಾರ್ಕ್ ನಿವಾಸಿ ವೈದ್ಯೆ ಅಪೂರ್ವ ಪ್ರವೀಣ್ ಚಂದ್ರ ಹೆಂಡ್ರೆ ಎಂದು ಗುರುತಿಸಲಾಗಿದೆ. ಕೈಗೆ ಇಂಜೆಕ್ಷನ್ ಸಿಕ್ಕಿ ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಅಪೂರ್ವ ಹೆಂಡ್ರೆ ಶಸ್ತ್ರಚಿಕಿತ್ಸಕರಾಗಿದ್ದು, ನಗರದ ಆಸ್ಪತ್ರೆಯೊಂದರಲ್ಲಿ ಪ್ರಾಕ್ಟಿಸ್​ ಮಾಡುತ್ತಿದ್ದರು. ರಾತ್ರಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಅವರು ತಡವಾಗಿ ಮನೆಗೆ ಮರಳಿದ್ದರು. ಸ್ವಲ್ಪ ಸಮಯದ ನಂತರ ಅಪೂರ್ವ ಮತ್ತೆ ಮನೆಯಿಂದ ಹೊರ ಹೋಗಿದ್ದಾರೆ. ಈ ವೇಳೆ ಹೊರಗಿನಿಂದ ಲಾಕ್​ ಮಾಡಿದ್ದರು.

ಇದರಿಂದ ಅನುಮನಗೊಂಡು ಹೊರ ಹೋಗಲು ಅಪೂರ್ವ ಪೋಷಕರು ಯತ್ನಿಸಿದಾಗ ಬಾಗಿಲು ಮುಚ್ಚಿತ್ತು. ಹೀಗಾಗಿ ಹಿಂಬಾಗಿಲಿನಿಂದ ಹೊರಗೆ ಹೋಗಿ ಅಪೂರ್ವಳನ್ನು ಹುಡುಕಿದ್ದಾರೆ. ಆದರೆ ಅವರು ಎಲ್ಲಿಯೂ ಪತ್ತೆಯಾಗಲಿಲ್ಲ.
ಈ ಬಗ್ಗೆ ಬೆಳಗ್ಗೆ ಶಾಹುಪುರಿ ಪೊಲೀಸ್ ಠಾಣೆಗೆ ಡಾ. ಪ್ರವೀಣ್ ಚಂದ್ರ ಹೆಂಡ್ರೆ ದೂರು ನೀಡಲು ತೆರಳುತ್ತಿದ್ದಾಗ ಕಾಲ್​ ಬಂದಿದೆ. ಡಿ ಮಾರ್ಟ್ ಪ್ರದೇಶದ ಪಾದಚಾರಿ ಮಾರ್ಗದಲ್ಲಿ ನಿಮ್ಮ ಮಗಳು ಬಿದ್ದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಕೂಡಲೇ ಅವರು ಸ್ಥಳಕ್ಕೆ ಧಾವಿಸಿದರು. ಆಗ ಅಪೂರ್ವ ಕೈಗೆ ಇಂಜೆಕ್ಷನ್ ಸಿಕ್ಕಿ ಹಾಕಿಕೊಂಡಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಸಿಪಿಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡುವ ಮುನ್ನವೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಅಪೂರ್ವ ಅವರ ಪರ್ಸ್‌ನಲ್ಲಿ ಔಷಧಿಯ ಬಾಟಲಿ ಮತ್ತು ಎರಡು ಇಂಜೆಕ್ಷನ್‌ಗಳು ಪತ್ತೆಯಾಗಿವೆ. ಅಪೂರ್ವ ಸಾವಿನ ಬಗ್ಗೆ ಅನುಮಾನಗಳು ಮೂಡಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss