ದಿಗಂತ ವರದಿ ಮಡಿಕೇರಿ:
ಕುಶಾಲನಗರ ಸಮೀಪದ ಕೊಪ್ಪ ಸೇತುವೆ ಬಳಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಸರಕಾರಿ ನೌಕರನ ಮೃತದೇಹ ಐದು ದಿನಗಳ ಬಳಿಕ ಪತ್ತೆಯಾಗಿದೆ.
ಮಡಿಕೇರಿಯ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಅರುಣ್ ಕೆ.ಎಸ್ (52)ಎಂಬವರು ಕಳೆದ ಬುಧವಾರ (ಜು.24) ಅಪರಾಹ್ನ ಕುಶಾಲನಗರ ಸಮೀಪದ ಕೊಪ್ಪ ಸೇತುವೆ ಬಳಿ ತುಂಬಿ ಹರಿಯುತ್ತಿದ್ದ ಕಾವೇರಿ ನದಿಗೆ ಹಾರಿದ್ದರು.
ಆ ಬಳಿಕ ಸ್ಥಳೀಯರು, ಅಗ್ನಿಶಾಮಕ ದಳ, ಎನ್.ಆರ್.ಎಫ್ ಸಿಬ್ಬಂದಿ, ಪೊಲೀಸರು, ದುಬಾರೆ ರಿವರ್ ರ್‍ಯಾಫ್ಟಿಂಗ್’ನ ನುರಿತ ಈಜುಗಾರರ ಸಹಿತ ಐದು ತಂಡಗಳು ನಿರಂತರವಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದವು. ಆದರೆ ಅರುಣ್ ಅವರ ಮೃತದೇಹ ಪತ್ತೆಯಾಗಿರಲಿಲ್ಲ. ಅದರ ಬದಲು ನಾಪತ್ತೆಯಾಗಿದ್ದ ಬಸವನಹಳ್ಳಿಯ ವ್ಯಕ್ತಿಯೊಬ್ಬರ ಮೃತದೇಹ ದುಬಾರೆ ರಿವರ್ ರ್‍ಯಾಫ್ಟಿಂಗ್’ನ ರ್‍ಯಾಫ್ಟರ್’ಗಳ ತಂಡಕ್ಕೆ ಗೋಚರಿಸಿತ್ತು.
ಇದೀಗ ಸೋಮವಾರ ಪೂರ್ವಾಹ್ನ ಕುಶಾಲನಗರದಿಂದ ಐದು ಕಿ.ಮೀ. ದೂರದ ಕೂಡಿಗೆ ಬಳಿ ಕಾವೇರಿ ನದಿಯಲ್ಲಿ ಅರುಣ್ ಮೃತದೇಹ ಪತ್ತೆಯಾಗಿದೆ. ಶನಿವಾರ ಅಪರಾಹ್ನದಿಂದ ಮಳೆ ಬಿಡುವು ನೀಡಿದ್ದರಿಂದ ಕಾವೇರಿ ನದಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು, ಪರಿಣಾಮವಾಗಿ ನದಿಯ ಬದಿಯಲ್ಲಿ
ಮೂಲತಃ ಮಂಡ್ಯ ಜಿಲ್ಲೆಯವರಾಗಿರುವ ಅರುಣ್, ತನ್ನ ಪತ್ನಿ ಹಾಗೂ ಓರ್ವ ಪುತ್ರನೊಂದಿಗೆ ಕುಶಾಲನಗರದಲ್ಲಿ ವಾಸವಾಗಿದ್ದರು.
ಅವರ ಮತ್ತೋರ್ವ ಪುತ್ರ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ಕಳೆದ ಒಂದೂವರೆ ತಿಂಗಳಿನಿಂದ ಕರ್ತವ್ಯಕ್ಕೆ ಹಾಜರಾಗದೆ ವೈದ್ಯಕೀಯ ರಜೆ ಪಡೆದಿದ್ದ ಅರುಣ್, ಬುಧವಾರ ಬೆಳಗ್ಗೆ 10 ಗಂಟೆಗೆ ಕಚೇರಿ ಆಗಮಿಸಿ ಸ್ವಲ್ಪ ಹೊತ್ತು ಕೆಲಸ ನಿರ್ವಹಿಸಿ ಕಚೇರಿಯಿಂದ ತೆರಳಿದ್ದರು. ಅಪರಾಹ್ನ ಅವರು ಕುಶಾಲನಗರದ ಸೇತುವೆ ಬಳಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಹಿಂದೆ ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದ ಅರುಣ್, ಕಳೆದ ಐದು ವರ್ಷಗಳಿಂದ ಮಡಿಕೇರಿಯ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು.