ಹೊಸದಿಗಂತ ವರದಿ ಮಂಡ್ಯ:
ಮಾಕಳಿಯಲ್ಲಿ ಸರ್ಕಾರಿ ಜಮೀನನ್ನು ನಾನು ಅನುಮೋದನೆ ಮಾಡಿಸಿಕೊಂಡಿದ್ದರೆ ಅದು ತಪ್ಪು, ಅದು ಜೋಡಿದಾರರ ಜಮೀನು. ಹಿಂದೆ ಅಲ್ಲಿ ಕೆರೆ ಚಿಹ್ನೆ ಇರಲಿಲ್ಲ. ಈಗ ಕೆರೆ ಚಿಹ್ನೆ ಬಂದಿದೆಯಂತೆ. ಅದನ್ನ ಇಲಾಖೆ ಬಗೆಹರಿಸಲಿದೆ ಎಂದು ಜಮೀನು ವಿವಾದ ಕುರಿತಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದರು.
ಮದ್ದೂರು ತಾಲೂಕು ಕೊಪ್ಪದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಆ ಭಾಗದಲ್ಲಿ ಸುಮಾರು 200 ಎಕರೆಗೂ ಸಮಸ್ಯೆ ಇದೆ. ಅದು ಬಹಳಷ್ಟು ತಲೆಮಾರು ಬದಲಾಗಿ ನನಗೆ ಬಂದಿದೆ. ಅಸೆಂಬ್ಲಿ ಎಲೆಕ್ಷನ್‌ನಲ್ಲೂ ನಾನು ತೋರಿಸಿಕೊಂಡಿದ್ದೇನೆ. ಇದರಲ್ಲಿ ಯಾವ ಮುಚ್ಚು ಮರೆಯನ್ನೂ ಮಾಡಿಲ್ಲ. ಇದನ್ನು ಅವರು ಹತಾಶರಾಗಿ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೆಸರೇಳದೆ ಪರೋಕ್ಷವಾಗಿ ಟೀಕಿಸಿದರು.
ಇನ್ನು ಲುಲು ಮಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ತುಂಬಾ ದಿನಗಳ ಹಿಂದೆ ಆ ಆಸ್ತಿಯನ್ನು ಅವರು ಖರೀದಿಸಿ ಜಾಯಿಂಟ್ ವೆಂಚರ್‌ನಲ್ಲಿ ಮಾಲ್ ಮಾಡಿದ್ದಾರೆ. ಅದರಲ್ಲಿ ತಪ್ಪಿದ್ದರೆ ತನಿಖೆ ಮಾಡಲಿ, ಅದು 15 ವರ್ಷದ ಆಸ್ತಿ. ಸುಖಾಸುಮ್ಮನೆ ಅದರ ಬಗ್ಗೆ ಮಾತನಾಡುವುದು ತರವಲ್ಲ ಎಂದು ಹೇಳಿದರು.
ಅವರಿಗೆ ಅಧಿಕಾರ ಬಿಟ್ಟು ಇರಲು ಆಗಲ್ಲ. ಅಧಿಕಾರ ಕೊಟ್ಟರೂ ಸರಿಯಾಗಿ ನಡೆಸಲ್ಲ, ನಮಗೆ ಅವರ ಬಗ್ಗೆ ಲಘುವಾಗಿ ಮಾತನಾಡುವ ಅವಶ್ಯಕತೆ ಇಲ್ಲ. ಅವರಿಗೆ ಅಧಿಕಾರ ಸಿಕ್ಕಷ್ಟು ದಿನ ಪೂರ್ಣಪ್ರಮಾಣದಲ್ಲಿ ಅಧಿಕಾರ ನಡೆಸಲು ಆಗಿಲ್ಲ. ನಮ್ಮ ಮಾಜಿ ಸ್ನೇಹಿತರನ್ನ ನೋಡಿದರೆ ನನಗೆ ಪಾಪ ಅನ್ನಿಸುತ್ತದೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ನನ್ನನ್ನು ನೋಡಿ ಅವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಅವರು ಆರೋಗ್ಯವಾಗಿ, ನೆಮ್ಮದಿಯಾಗಿ, ಖುಷಿಯಾಗಿರಬೇಕಾದರೆ ನಾವು ರಿಟೈರ್‌ಮೆಂಟ್ ತೆಗೆದುಕೊಳ್ಳಬೇಕು ಅಷ್ಟೆ ಎಂದು ಹೆಸರೇಳದೆ ಛೇಡಿಸಿದರು.
ಪೆನಾಲ್ಟಿ ಕಟ್ಟುವುದಕ್ಕೆ ನಾವು ಹೇಳಿದ್ದೆವಾ:
68 ಸಾವಿರ ಪೆನಾಲ್ಟಿ ಕಟ್ಟೋಕೆ ನಾವು ಹೇಳಿದ್ದೆವಾ ಎಂದು ಪ್ರಶ್ನಿಸಿದ ಅವರು, ಏನೋ ಗೊತ್ತಿಲ್ಲದೆ ಕರೆಂಟ್ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರೆ ಮುಗಿದುಹೋಗುತ್ತಿತ್ತು. ಅದು ಬಿಟ್ಟು ಅವರಿವರನ್ನು ಬಾಯಿಗೆ ಬಂದಂತೆ ಬೈಯುತ್ತಾ, ಲಘುವಾಗಿ ಮಾತನಾಡೋದು ಅವರಿಗೆ ಶೋಭೆ ತರುವುದಿಲ್ಲ. ಮಾಜಿ ಪ್ರಧಾನಿ ರಕ್ಷಣೆ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡಬಾರದು, ಇತಿಮಿತಿ ಇರಬೇಕು. ಕುಮಾರಸ್ವಾಮಿಗೆ ನಮ್ಮನ್ನು ಈ ಸ್ಥಿತಿಯಲ್ಲಿ ನೋಡಲಾಗುತ್ತಿಲ್ಲ. ಪಾಪ ಅವರಿಗೆ ತೀರಾ ನೋವಾಗುತ್ತದೆ ಎಂದು ಲೇವಡಿ ಮಾಡಿದರು.