ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದಿನ ಆಕೊಂಡಾಪುರದ KIMS ಆಸ್ಪತ್ರೆ ವೈದ್ಯರು ಅಪರೂಪದ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದ್ದು, ವೈದ್ಯಕೀಯ ಲೋಕವೇ ಅಚ್ಚರಿಪಟ್ಟಿದೆ. ಬರೋಬ್ಬರಿ 21 ವರ್ಷಗಳ ನಂತರ ಯುವಕನ ಶ್ವಾಸಕೋಶದಲ್ಲಿ ಸಿಲುಕಿದ್ದ ಪ್ಲಾಸ್ಟಿಕ್ ಪೆನ್ ಕ್ಯಾಪ್ ಹೊರಗೆ ತೆಗೆದು ದಾಖಲೆ ಬರೆದಿದ್ದಾರೆ.
ಕರೀಂ ನಗರದ 26 ವರ್ಷದ ಯುವಕ. ಈತ ಕಳೆದ ಒಂದು ತಿಂಗಳಿನಿಂದ ತೂಕ ಇಳಿಕೆ ಹಾಗೂ ಅತಿಯಾದ ಕೆಮ್ಮುವಿನಿಂದ ಬಳಲುತ್ತಿದ್ದ. ಅಷ್ಟೇ ಅಲ್ಲ ಕೇವಲ 10 ದಿನಗಳಲ್ಲಿ ಈ ಸಮಸ್ಯೆ ಸಾಕಷ್ಟು ತೀವ್ರವಾಗಿತ್ತು. ಇದರ ಪರಿಣಾಮ ನಿದ್ದೆ ಕೂಡ ಮಾಡಲು ಆಗುತ್ತಿರಲಿಲ್ಲ. ಆರೋಗ್ಯ ಹದಗೆಡುತ್ತದಂತೆ ವೈದ್ಯರ ಬಳಿ ಹೋದಾಗ CT ಸ್ಕ್ಯಾನ್ ಮಾಡಿದ್ರು. CT ಸ್ಕ್ಯಾನ್ ಜತೆಗೆ ಇವರನ್ನು KIMS ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿ ಮತ್ತೊಂದು ಸ್ಕ್ಯಾನ್ ಮಾಡಿದಾಗ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಪೆನ್ನಿನ ಕ್ಯಾಪ್ ಸಿಲುಕಿರುವುದು ಕಂಡುಬಂದಿತ್ತು.
ಶ್ವಾಸಕೋಶದ ಭಾಗದಲ್ಲಿ ಊತ ಕಂಡು ಬಂದಿದೆ. ಇದು ಕೆಮ್ಮುವಿಗೆ ಕಾರಣ ಇರಬಹುದು ಎಂದು ವೈದ್ಯರು ಭಾವಿಸಿದ್ದರು. ಪರೀಕ್ಷೆ ನಡೆಸಿದಾಗ ಶ್ವಾಸಕೋಶದ ಒಳಗಡೆ ಪೆನ್ನಿನ ಕ್ಯಾಪ್ ಸಿಲುಕಿರುವುದು ಗೊತ್ತಾಗಿದೆ. ಇವರು ಐದು ವರ್ಷ ಇದ್ದಾಗ ಪೆನ್ನಿನ ಕ್ಯಾಪ್ ನುಂಗಿರುವುದು ಧೃಡವಾಗಿದೆ.
ಸುಮಾರು 3 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಪೆನ್ ಕ್ಯಾಪ್ ಹೊರಗೆ ತೆಗೆಯಲಾಗಿದೆ. 21 ವರ್ಷಗಳಿಂದ ಪೆನ್ನಿನ ಕ್ಯಾಪ್ ಒಳಗಡೆ ಇದ್ದರಿಂದ ಶ್ವಾಸಕೋಶ ಹಾನಿಯಾಗಿದೆ. ಚಿಕಿತ್ಸೆ ಮೂಲಕ ದೇಹದ ಭಾಗಕ್ಕೆ ಯಾವುದೇ ತೊಂದರೆ ಆಗದಂತೆ ನಿಗಾ ವಹಿಸಲಾಗಿದೆ ಎಂದರು ವೈದ್ಯರು.