ಹೊಸದಿಗಂತ ವರದಿ, ಹೊನ್ನಾವರ:
ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೯ ಬಾಳೆಗದ್ದೆ ತಿರುವಿನ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಬಸ್ ಪಲ್ಟಿಯಾದ ಘಟನೆ ಶನಿವಾರ ಸಂಭವಿಸಿದೆ.
ಖಾಸಗಿ ಬಸ್ ಬೆಂಗಳೂರಿನಿಂದ ಗೋಕರ್ಣಕ್ಕೆ ಬರುವ ವೇಳೆಗೆ ಮುಗ್ವಾ ಗ್ರಾ.ಪಂ. ವ್ಯಾಪ್ತಿಯ ಬಾಳೆಗದ್ದೆಯ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮುಗಿಚಿ ಗಟಾರದಲ್ಲಿ ಬಿದ್ದಿದೆ. ಈ ವೇಳೆ ಸಮೀಪದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಕರೆಂಟ್ ಶಾಕ್ ಅನಾಹುತ ತಪ್ಪಿದೆ. ಬಸ್‌ನಲ್ಲಿದ್ದ ೨೮ ಪ್ರಯಾಣಿಕರಲ್ಲಿ ೨೨ ಪ್ರಯಾಣಿಕರು ಗಾಯಗೊಂಡಿದ್ದು, ಎಂಟು ಜನರು ತಿವ್ರ ಗಾಯಗೊಂಡಿದ್ದವರು ಸೇರಿ ಎಲ್ಲಾ ಗಾಯಾಳುಗಳನ್ನು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಮತ್ತು ಮಂಗಳೂರು, ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಬಸ್ ಚಾಲಕ ರಾಮನಗರ ಕನಕಪುರದ ಬಸ್ ಚಾಲಕ ಶಿವಕುಮಾರ ಎಸ್. ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.