ಹೊಸದಿಗಂತ ವರದಿ, ಮಡಿಕೇರಿ:
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನೋರ್ವ ಡಿಪೋ ಸಮೀಪ ನಿರ್ವಾಹಕನಿಗೆ ಕೊಲೆ ಬೆದರಿಕೆಯೊಡ್ಡಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ.
ಇದೇ ಆರೋಪದಡಿಯಲ್ಲಿ ಬಂಧನಕ್ಕೊಳಗಾದ ಚಾಲಕನನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಲಾಗಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಡಿಕೇರಿ ಘಟಕದ ಮಡಿಕೇರಿ – ಬಿರುನಾಣಿ ಮಾರ್ಗದ ಬಸ್ ಚಾಲಕ ವೇಣುಗೋಪಾಲ್ ಎಂಬವರೇ ನಿರ್ವಾಹಕನಿಗೆ ಬೆದರಿಕೆಯೊಡ್ಡಿ ಅಮಾನತಿಗೆ ಒಳಗಾದವರಾಗಿದ್ದಾರೆ.
ವೇಣುಗೋಪಾಲ್ ಮೊಬೈಲ್’ನಲ್ಲಿ ಮಾತನಾಡಿಕೊಂಡೇ ಬಸ್ ಚಾಲನೆ ಮಾಡುತ್ತಿದ್ದುದನ್ನು ಬಸ್ಸಿನಲ್ಲಿದ್ದವರು ಮೊಬೈಲ್’ ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ವಿಚಾರವಾಗಿ ಕುಪಿತನಾದ ಚಾಲಕ ವೇಣುಗೋಪಾಲ್, ಮಡಿಕೇರಿ ಡಿಪೋದಲ್ಲಿ ನಿರ್ವಾಹಕ ರೂಪೇಶ್ ಜೊತೆ ಕಲಹಕ್ಕಿಳಿದಿದ್ದಾನೆ. ನಂತರ ಕೋವಿ ತಂದು ನಿರ್ವಾಹಕ ರೂಪೇಶ್’ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.
ಕೊಲೆ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ವೇಣುಗೋಪಾಲ್ ನನ್ನು ಬಂಧಿಸಿ ನ್ಯಾಯಾಲಯಕ್ಜೆ ಹಾಜರುಪಡಿಸಿದ್ದಾರೆ.
ಜಾಮೀನಿನ ಮೇಲೆ ಆರೋಪಿ ಬಿಡುಗಡೆಯಾಗಿದ್ದರೂ, ಇದೀಗ ಸಾರಿಗೆ ಸಂಸ್ಥೆ ಅಧಿಕಾರಿಗಳು ವೇಣುಗೋಪಾಲನನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ.