September 27, 2026
Sunday, September 27, 2026
spot_img

ಸತೀಶ್ ಜಾರಕಿಹೊಳಿ ಬಾಮೈದನ ಮನೆ ಮೇಲಿನ ಇಡಿ ದಾಳಿ ಅಂತ್ಯ: ಆದರೆ ʼಲೋಬೋʼ ಸಿಗಲೇ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸಹೋದರಿಯ ಪತಿ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಮನೆ ಮೇಲೆ ನಡೆದಿದ್ದ ಜಾರಿ ನಿರ್ದೇಶನಾಲಯದ ಸುದೀರ್ಘ ದಾಳಿ ಕೊನೆಗೂ ಅಂತ್ಯವಾಗಿದೆ.

ಸತತ 24 ಗಂಟೆಗಳು ದಾಖಲೆ ಪರಿಶೀಲನೆ, ಶೋಧ ನಡೆಸಿದ್ದು, ಊಟ ಉಪಹಾರ ಎಲ್ಲವನ್ನೂ ಮನೆಗೆ ತರಿಸಿಕೊಂಡು ಅಧಿಕಾರಿಗಳು ಕಾರ್ಯನಿರ್ವಹಿಸಿದ್ದರು. ಇದೀಗ ಅಧಿಕಾರಿಗಳು ಬೆಳಗಾವಿಯಿಂದ ಹೊರಟಿದ್ದಾರೆ.ಅಬಕಾರಿ ಇಲಾಖೆಯ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಇಡಿ ಅಧಿಕಾರಿಗಳು, ಬೆಳಗಾವಿ ನಗರದ ಟಿವಿ ಸೆಂಟರ್‌ನಲ್ಲಿರುವ ಮಂಜುನಾಥ್ ಅವರ ಮುಖ್ಯ ನಿವಾಸ ಸೇರಿದಂತೆ ಜಿಲ್ಲೆಯ ಒಟ್ಟು ಆರು ಕಡೆಗಳಲ್ಲಿ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ರಾಜ್ಯಾದ್ಯಂತ ಬೆಂಗಳೂರು, ಮೈಸೂರು ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಕಡೆಗಳಲ್ಲಿ ಈ ದಾಳಿ ನಡೆದಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್‌ ಆಪ್ತನಾಗಿರುವ ಲೋಬೋ ಎನ್ನುವ ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿದೆ. ಬೆಳಗಾವಿಯಲ್ಲಿ ಲೋಬೋ ಪತ್ತೆಯಾಗದ ಹಿನ್ನೆಲೆಯಲ್ಲಿ, ಅವರನ್ನು ವಶಕ್ಕೆ ಪಡೆಯಲು ಇಡಿಯ ಎರಡು ವಿಶೇಷ ತಂಡಗಳು ಈಗಾಗಲೇ ಗೋವಾಗೆ ರವಾನೆಯಾಗಿವೆ ಎಂದು ಮೂಲಗಳು ತಿಳಿಸಿವೆ.

Must Read