ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದ ಜಾಫರ್ ಎಕ್ಸ್‌ಪ್ರೆಸ್ ರೈಲು ಅಪಹರಣದ ಹಿಂದೆ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ವಿದೇಶಾಂಗ ಕಚೇರಿಯ ಆರೋಪಕ್ಕೆ ಭಾರತ ಖಡಕ್ ತಿರುಗೇಟು ನೀಡಿದೆ.
ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಲ್ಲಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ . ತನ್ನ ಆಂತರಿಕ ಸಮಸ್ಯೆ ಮತ್ತು ವೈಫಲ್ಯಗಳಿಗೆ ಭಾರತ ಇತರರಿಗೆ ಬೆಟ್ಟು ಮಾಡಿ ತೋರಿಸುವ ಬದಲು, ತನ್ನನ್ನು ತಾನು ಪರಾಮರ್ಶಿಸಿಕೊಳ್ಳಲಿ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿರುಗೇಟು ನೀಡಿದ್ದಾರೆ.
ಈ ದಾಳಿಯ ಹಿಂದೆ ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತದ ಬೆಂಬಲಿಗರು ಇದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ. ಅಪಹರಣಕ್ಕೆ ಸಂಬಂಧಿಸಿದಂತೆ ಅಫ್ಘಾನಿಸ್ತಾನದಿಂದ ಕರೆಗಳು ಬಂದಿರುವ ಬಗ್ಗೆ ಪುರಾವೆಗಳು ಇವೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಶಫ್ಕತ್ ಅಲಿ ಖಾನ್ ಹೇಳಿದ್ದಾರೆ. ಅಲ್ಲದೇ, ಭಾರತ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ, ಈ ಘಟನೆಯಲ್ಲೂ ಭಾರತದ ಪಾತ್ರವಿದೆ ಎಂದು ಆರೋಪ ಮಾಡಿದ್ದರು.
ಪಾಕಿಸ್ತಾನದ ಈ ಆರೋಪಗಳನ್ನು ‘ಆಧಾರರಹಿತ’ . ಭಯೋತ್ಪಾದನೆಯ ಕೇಂದ್ರಬಿಂದು ಪಾಕಿಸ್ತಾನ ಎಂದು ಜಗತ್ತಿಗೆ ತಿಳಿದಿದೆ ಮತ್ತು ಪಾಕಿಸ್ತಾನ ತನ್ನ ವೈಫಲ್ಯಗಳಿಗೆ ಇತರರನ್ನು ದೂಷಿಸುವುದನ್ನು ನಿಲ್ಲಿಸಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಖಂಡಿಸಿದ್ದಾರೆ.
ಮತ್ತೊಂದೆಡೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅಫ್ಘಾನಿಸ್ತಾನ, ಬಲೂಚಿಸ್ತಾನ ರೈಲು ದಾಳಿಯಲ್ಲಿ ತನ್ನ ಪಾತ್ರವಿದೆ ಎಂಬ ಪಾಕಿಸ್ತಾನದ ಆರೋಪವನ್ನು ಆಧಾರರಹಿತ ಎಂದು ಖಂಡಿಸಿದೆ. ಪಾಕಿಸ್ತಾನ ತನ್ನದೇ ಆದ ಭದ್ರತಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಅಫ್ಘಾನಿಸ್ತಾನ ವಿದೇಶಾಂಗ ಸಚಿವಾಲಯ ಹೇಳಿದೆ.