ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಚಿತ್ರರಂಗದಲ್ಲಿ ಈ ವರ್ಷ ಬಿಡುಗಡೆಯಾಗಿ 135 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದ್ದ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಪ್ರೇಮಲು’ ಸೀಕ್ವೆಲ್ ಕನ್ಫರ್ಮ್ ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಬಿಗ್ ಶಾಕ್ ಸಿಕ್ಕಿದೆ. ಚಿತ್ರದ ನಾಯಕ ನಟ ನಸ್ಲೆನ್ ಮತ್ತು ಮಮಿತಾ ಬೈಜು ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಪ್ರೇಮಲು 2’ ಚಿತ್ರವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಚಿತ್ರದ ಸ್ಕ್ರಿಪ್ಟ್ (ಕಥೆ) ಅಂದುಕೊಂಡ ಮಟ್ಟದಲ್ಲಿ ಮೂಡಿಬರದ ಕಾರಣ ಇಡೀ ಪ್ರಾಜೆಕ್ಟ್ ಅನ್ನೇ ಕೈಬಿಡಲು ಚಿತ್ರತಂಡ ನಿರ್ಧರಿಸಿದ್ದು, ಸಚಿನ್-ರೀನು ಜೋಡಿಯನ್ನು ಮತ್ತೆ ತೆರೆಮೇಲೆ ನೋಡಬೇಕೆಂದಿದ್ದ ಸಿನಿಪ್ರಿಯರಿಗೆ ಭಾರಿ ನಿರಾಸೆಯಾಗಿದೆ.
ಸ್ಕ್ರಿಪ್ಟ್ ಸಮಸ್ಯೆಯಿಂದ ಚಿತ್ರ ಕೈಬಿಟ್ಟ ತಂಡ
ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಆಘಾತಕಾರಿ ಸುದ್ದಿಯನ್ನು ಖಚಿತಪಡಿಸಿರುವ ನಟ ನಸ್ಲೆನ್, ಮೊದಲ ಭಾಗದ ಯಶಸ್ಸಿನ ನಂತರ ‘ಪ್ರೇಮಲು 2’ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇತ್ತು ಎಂದು ಹೇಳಿದ್ದಾರೆ. ಆದರೆ ಚಿತ್ರದ ಕಥೆ ನಾವು ಅಂದುಕೊಂಡಷ್ಟು ಪರಿಪೂರ್ಣವಾಗಿ ಮೂಡಿಬರಲಿಲ್ಲ. ಮೊದಲ ಭಾಗದ ಘನತೆಗೆ ಧಕ್ಕೆ ತರುವಂತಹ ಯಾವುದೇ ಸಾಧಾರಣ ಸ್ಕ್ರಿಪ್ಟ್ ಹಿಡಿದು ಸಿನಿಮಾ ಮಾಡಲು ಇಡೀ ಮ್ಯಾನೇಜ್‌ಮೆಂಟ್ ಇಷ್ಟಪಡಲಿಲ್ಲ. ಕಥೆಯಲ್ಲಿ ನಮಗೆ ಸಂಪೂರ್ಣ ತೃಪ್ತಿ ಇಲ್ಲದ ಕಾರಣ ಪ್ರಸ್ತುತ ಈ ಪ್ರಾಜೆಕ್ಟ್ ಅನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೊದಲ ಭಾಗದ ಯಶಸ್ಸಿಗೆ ಧಕ್ಕೆ ತರಲು ಇಷ್ಟವಿಲ್ಲದ ನಿರ್ಮಾಪಕರು
ಚಿತ್ರದ ಸಹ-ನಿರ್ಮಾಪಕರಾದ ದಿಲೀಶ್ ಪೋತನ್ ಈ ಹಿಂದೆಯೇ ಚಿತ್ರದ ವಿಳಂಬದ ಬಗ್ಗೆ ಸಣ್ಣ ಸುಳಿವು ನೀಡಿದ್ದರು. ಒಂದು ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ಮಾಡುವಾಗ ಜವಾಬ್ದಾರಿ ಹೆಚ್ಚಿರುತ್ತದೆ. ಕೇವಲ ಹಣ ಗಳಿಸುವ ಉದ್ದೇಶಕ್ಕಾಗಿ ಸಿನಿಮಾ ಮುಂದುವರಿಸಬಾರದು ಎಂಬುದು ನಿರ್ಮಾಪಕರು ಹಾಗೂ ನಿರ್ದೇಶಕರ ಕಠಿಣ ನಿಲುವಾಗಿತ್ತು. ಅತ್ಯುತ್ತಮ ಸ್ಕ್ರಿಪ್ಟ್ ಕೈಸೇರುವವರೆಗೂ ಚಿತ್ರದ ಕೆಲಸಗಳನ್ನು ಮುನ್ನಡೆಸದಿರಲು ಚಿತ್ರತಂಡ ನಿರ್ಧರಿಸಿದೆ ಎಂದು ಹೇಳಿದ್ದರು.
ಭವಿಷ್ಯದಲ್ಲಿ ಸಿಗಲಿದೆಯೇ ಮತ್ತೊಂದು ಅವಕಾಶ?
ಸದ್ಯಕ್ಕೆ ಸಿನಿಮಾ ಸಂಪೂರ್ಣವಾಗಿ ಕ್ಯಾನ್ಸಲ್ ಆಗಿರುವುದು ಕನ್ಫರ್ಮ್ ಆದರೂ, ಅಭಿಮಾನಿಗಳಿಗೆ ನಸ್ಲೆನ್ ಸಣ್ಣ ಭರವಸೆಯೊಂದನ್ನು ನೀಡಿದ್ದಾರೆ. ಭವಿಷ್ಯದಲ್ಲಿ ಎಂದಾದರೂ ‘ಪ್ರೇಮಲು’ ಚಿತ್ರದ ಸಚಿನ್ ಮತ್ತು ರೀನು ಪಾತ್ರಗಳಿಗೆ ಸೂಕ್ತವೆನಿಸುವ ಮತ್ತು ಅದ್ಭುತವಾಗಿರುವ ಕಥೆ ಸಿದ್ಧವಾದರೆ, ಚಿತ್ರ ಮತ್ತೆ ಸೆಟ್ಟೇರುವ ಸಣ್ಣ ಸಾಧ್ಯತೆಯನ್ನು ನಸ್ಲೆನ್ ಸ್ಪಷ್ಟಪಡಿಸಿದ್ದಾರೆ.
ಹೊಸ ಸಿನಿಮಾಗಳಲ್ಲಿ ಚಿತ್ರತಂಡ ಬ್ಯುಸಿ
‘ಪ್ರೇಮಲು’ ಚಿತ್ರದ ನಿರ್ದೇಶಕ ಗಿರೀಶ್ ಎಡಿ ಮತ್ತು ನಾಯಕಿ ಮಮಿತಾ ಬೈಜು ಈಗಾಗಲೇ ತಮ್ಮ ಹೊಸ ಪ್ರಾಜೆಕ್ಟ್‌ನತ್ತ ಮುಖ ಮಾಡಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಮುಂದಿನ ಚಿತ್ರದಲ್ಲಿ ಖ್ಯಾತ ನಟ ನಿವಿನ್ ಪೌಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸದ್ಯ ಇಡೀ ತಂಡ ಈ ಹೊಸ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯಸಿಯಾಗಿದ್ದಾರೆ.



