ಹೊಸ ದಿಗಂತ ವರದಿ, ಮೈಸೂರು:
ಪಂಚರಾಜ್ಯ ಚುನಾವಣೆಯ ಫಲಿತಾಂಶವು ಈ ರೀತಿಯಾಗಿ ಬರಬಹುದೆಂದು ನಾವು ನಿರೀಕ್ಷೆ ಮಾಡಿರಲಿಲ್ಲ, ಈ ಫಲಿತಾಂಶವು ರಾಜ್ಯ ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದರು.
ಗುರುವಾರ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಯಾಗಿರುವ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಈ ರೀತಿಯ ಚುನಾವಣೆ ಫಲಿತಾಂಶ ಬರುತ್ತದೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ. ಉತ್ತರ ಖಂಡ್, ಪಂಜಾಬ್ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬಹುದೆಂದು ನಿರೀಕ್ಷೆ ಮಾಡಿದ್ದೇವು. ಆದರೆ ಅದು ಸುಳ್ಳಾಗಿದೆ. ಉತ್ತರ ಪ್ರದೇಶದಲ್ಲಿ ಕಳೆದ ಬಾರಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಪಡೆದಿರಲಿಲ್ಲ, ಈ ಬಾರಿ ಪ್ರಿಯಾಂಕ ಗಾಂಧಿ ಅವರ ನೇತೃತ್ವದಲ್ಲಿ ಪಕ್ಷದ ಸಂಘಟನೆ ಮಾಡಿ, ತೀವ್ರ ಶ್ರಮ ಹಾಕಿ ಹೋರಾಟ ಮಾಡಿದ್ದೇವೆ, ಆದರೆ ಅದು ಫಲ ನೀಡಿಲ್ಲ, ಮತದಾರರು ನೀಡಿದ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕಾಗಿದೆ, ಸೋಲಿಗೆ ಪರಮರ್ಶೆ, ಆತ್ಮವಾಲೋಕನ ಮಾಡಿಕೊಂಡು, ಮುಂದಿನ ಹೆಜ್ಜೆಯನ್ನು ಇಡಬೇಕಾಗಿದೆ. ಸೋಲಿನ ಜವಾಬ್ದಾರಿಯನ್ನ ಆಯಾ ರಾಜ್ಯದ ನಾಯಕರೇ ಹೊರಬೇಕಿದೆ ಎಂದರು.
ರಾಹುಲ್‌ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಎಂದೂ ಅಧಿಕಾರಕ್ಕೆ ಅಂಟಿಕೊoಡಿಲ್ಲ.
ರಾಹುಲ್‌ಗಾoಧಿ ಬೇಕಿದ್ದರೆ ಉಪ ಪ್ರಧಾನಿ ಆಗಬಹುದಿತ್ತು. ವಿನಾಕಾರಣ ಬಿಜೆಪಿ ನಮ್ಮ ನಾಯಕರ ತೇಜೋವದೆ ಮಾಡುವ ಕೆಲಸ ಮಾಡಿದೆ.ಮುಂದಿನ ಚುನಾವಣೆಯನ್ನೂ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಸಲಿದ್ದೇವೆ ಎಂದು ತಿಳಿಸಿದರು.
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಈ ಚುನಾವಣೆಯ ಫಲಿತಾಂಶ ರಾಜ್ಯ ಕಾಂಗ್ರೆಸ್‌ನ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಗತ್ಯವಿಲ್ಲ. ಆದರೆ ಚುನಾವಣೆ ಫಲಿತಾಂಶ ಎಚ್ಚರಿಕೆಯ ಗಂಟೆಯಾಗಿದೆ.
ಈ ಫಲಿತಾಂಶವನ್ನ ರಾಜ್ಯ ನಾಯಕರು ಗಂಭೀರವಾಗಿ ಪರಿಗಣಿಸಬೇಕು. ಚುನಾವಣೆ ಸೋಲಿನ ಬಗ್ಗೆ ಪರಾಮರ್ಶೆ ಅಗತ್ಯ.ಬಿಜೆಪಿಯ ತಂತ್ರಗಾರಿಕೆಗೆ ಕಾಂಗ್ರೆಸ್ ಕೂಡ ಪ್ರತಿತಂತ್ರ ರೂಪಿಸಬೇಕು. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ.ರಾಜ್ಯ ಕಾಂಗ್ರೆಸ್ ನಾಯಕರು ಕೂಡ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಬಿಜೆಪಿ ಕೇವಲ ಚುನಾವಣೆ ಸಂದರ್ಭದಲ್ಲಿ ತಂತ್ರಗಾರಿಕೆ ಮಾಡುತ್ತದೆ. ಜನರನ್ನು ಭಾವನಾತ್ಮಕವಾಗಿ ಸೆಳೆಯುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಅವರಿಗೆ ಆಸಕ್ತಿ ಇಲ್ಲ ಎಂದು ಟೀಕಿಸಿದರು.