ಎಲ್ ಇ ಡಿ ಬಲ್ಬ್ ವಿತರಣೆ ಕ್ರಾಂತಿ ಮಾಡಿದ್ದ ಸರ್ಕಾರಿ ಕಂಪನಿಯೀಗ ಸೋಲಾರ್ ಒಲೆ ವಿಕ್ರಮಕ್ಕೆ ಸಜ್ಜು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಜಾಲಾ ಯೋಜನೆಯ ಮೂಲಕ ಕಡಿಮೆ ಬೆಲೆಯಲ್ಲಿ ಕೋಟ್ಯಂತರ ಎಲ್‌ಇಡಿ ಬಲ್ಬುಗಳನ್ನು ವಿತರಿಸಿ ಸಾವಿರಾರು ಮೆಗಾವ್ಯಾಟ್‌ ವಿದ್ಯುತ್‌ ಉಳಿತಾಯಕ್ಕೆ ಕಾರಣವಾಗಿದ್ದ ಸರ್ಕಾರಿ ಸ್ವಾಮ್ಯದ ಕಂಪನಿಯಾದ ಎನರ್ಜಿ ಎಫಿಷಿಯನ್ಸಿ ಸರ್ವೀಸಸ್ ಲಿಮಿಟೆಡ್ (EESL) ಇದೀಗ ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡಲು ಹೊಸ ಹೆಜ್ಜೆಯಿಡಲು ಯೋಜಿಸುತ್ತಿದ್ದು ಸೌರ ಒಲೆಗಳನ್ನು ವ್ಯಾಪಕವಾಗಿ ಅಳವಡಿಸುವ ಕುರಿತು ಚಿಂತಿಸುತ್ತಿದೆ.

2070 ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯನ್ನು ಸಾಧಿಸುವ ಗುರಿ ಭಾರತದ್ದು. ಈ ನಿಟ್ಟಿನಲ್ಲಿ ಸೋಲಾರ್‌ ಒಲೆಗಳ ಅಳವಡಿಕೆಯು ಭಾರೀ ಪ್ರಮಾಣದ ಕೊಡುಗೆ ನೀಡಲಿದೆ. ಕಾರ್ಬನ್‌ ಫೈನಾನ್ಸಿಂಗ್‌ ಅರ್ಥಾತ್‌ ಇಂಗಾಲ ಕ್ರೆಡಿಟ್‌ಗಳ ಮಾರಾಟದ ಮೂಲಕ ಇಇಎಸ್‌ಎಲ್‌ ಈ ಸೋಲಾರ್‌ ಒಲೆಗಳ ಅಳವಡಿಕೆಗೆ ಹಣಕಾಸು ಸಹಾಯವನ್ನು ಒದಗಿಸಲಿದ್ದು ವ್ಯಾಪಕವಾಗಿ ಸೋಲಾರ್‌ ಒಲೆಗಳನ್ನು ಅಳವಡಿಸಲು ಮುಂದಾಗಿದೆ. ಕಾರ್ಬನ್‌ ಕ್ರೆಡಿಟ್‌ ಎಂದರೆ ಒಂದು ಕಂಪನಿಗೆ ಅಥವಾ ಕಾರ್ಖಾನೆಗೆ ಅನುಮತಿಸಲಾದ ಇಂಗಾಲ ಹೊರಸೂಸುವಿಕೆಯ ಪ್ರಮಾಣ. ಒಂದು ನಿರ್ಧಿಷ್ಟ ಕಂಪನಿಯು ತನಗೆ ಅನುಮತಿಸಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇಂಗಾಲವನ್ನು ಹೊರಸೂಸಿದರೆ ಅದು ತನ್ನ ಉಳಿದ ಕಾರ್ಬನ್‌ ಹೊರಸೂಸುವಿಕೆ ಪ್ರಮಾಣವನ್ನು ಅಗತ್ಯವಿರುವ ಇನ್ನೊಂದು ಕಂಪನಿಗೆ ಮಾರಾಟ ಮಾಡಬಹುದು. ಈ ರೀತಿ ಕಾರ್ಬನ್‌ ವಿನಿಮಯ ಮಾರುಕಟ್ಟೆ ಈಗಾಗಲೇ ದೇಶದಲ್ಲಿ ಚಾಲ್ತಿಯಲ್ಲಿದೆ.

ಹೀಗೆ ಇಂಗಾಲ ಹಣಕಾಸನ್ನು ಬಳಸಿಕೊಂಡು ಪ್ರಾಯೋಗಿಕವಾಗಿ ಎಲ್ಲ ಫಲಾನುಭವಿಗಳಿಗೆ ಯಾವುದೇ ವೆಚ್ಚವಿಲ್ಲದೇ ಒಲೆಗಳನ್ನು ಒದಗಿಸಲು ಇಇಎಸ್‌ಎಲ್‌ ಚಿಂತಿಸಿದೆ. ಈ ಕುರಿತು ಕಂಪನಿಯು ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿದ್ದು ವಿನ್ಯಾಸ, ತಂತ್ರಜ್ಞಾನ, ಅಳವಡಿಕೆ ಮುಂತಾದ ವಿಷಯಗಳ ಕುರಿತಾಗಿ ಸಮಾಲೋಚನೆ ನಡೆಸಲಿದೆ.

ಮನೆಗಳಿಗೆ ಸೋಲಾರ್‌ ಒಲೆಗಳನ್ನು ವಿತರಿಸುವ ಈ ಯೋಜನೆಯು ಅನೇಕ ಅಂಶಗಳನ್ನು ಒಳಗೊಂಡಿದ್ದು 1,000 Wp ಸಾಮರ್ಥ್ಯದ ಸೌರ ಫಲಕ, ಸಂಗ್ರಾಹಕ ಬ್ಯಾಟರಿಗಳು, ಕುಕಿಂಗ್‌ ಸ್ಟವ್‌, ಪಾತ್ರೆಗಳನ್ನು ವಿತರಿಸುವ ಕುರಿತು ಚಿಂತಿಸಲಾಗಿದೆ ಎಂದು ಕಂಪನಿಯು ಹೇಳಿದೆ. ಈ ಕುರಿತು ಮಾರ್ಚ್‌ ತಿಂಗಳ ಮೂರನೇ ವಾರದಲ್ಲಿ ಹೂಡಿಕೆದಾರರು, ತಂತ್ರಜ್ಞಾನ ಪೂರೈಕೆದಾರರು, ಸ್ಟಾರ್ಟ್-ಅಪ್‌ಗಳು, ಕಾರ್ಬನ್ ಹಣಕಾಸು ತಜ್ಞರು, ಅಂತರರಾಷ್ಟ್ರೀಯ ಸಂಸ್ಥೆಗಳು, ಎನ್‌ಜಿಒಗಳು, ಕಾರ್ಬನ್ ಮಾರುಕಟ್ಟೆ ಕಂಪನಿಗಳು ಮುಂತಾದ ಪಾಲುದಾರರ ಸಭೆಯನ್ನು ಕರೆದಿದೆ.

ಆ ಮೂಲಕ ಈಗಾಗಲೇ ನೂರಾರು ರೂಪಾಯಿಗಳ ಎಲ್‌ಇಡಿ ಬಲ್ಬಗಳನ್ನು ಕೈಗೆಟಕುವ ದರದಲ್ಲಿ ದೊರಕುವಂತೆ ಮಾಡಿದ್ದ ಕಂಪನಿ ಇಇಎಸ್‌ಎಲ್‌ ಸೌರ ಒಲೆಗಳ ಮೂಲಕ ಇಂಧನ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಲು ಮುಂದಾಗಿದೆ.

ಒಂದು ವೇಳೆ ಸೌರ ಒಲೆಗಳು ವ್ಯಾಪಕವಾಗಿ ಗೃಹಬಳಕೆಯಾಗಿ ಹೊರಹೊಮ್ಮಿದರೆ ದೇಶದ ಇಂಗಾಲ ಹೊರಸೂಸುವಿಕೆಯು ಗಣನೀಯವಾಗಿ ಕಡಿಮೆಯಾಗಲಿದೆ. 2070ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಗೆ ಸಹಾಯಕವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!