ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ಪಾರ್ಕಿಂಗ್ ಶುಲ್ಕ ಹಾಗೂ ಕಸ ಸಂಗ್ರಹಕ್ಕು ತೆರಿಗೆ ವಿಧಿಸಲು ನಿರ್ಧರಿಸಿರುವ ಸರ್ಕಾರದ ನಿರ್ಧಾರವನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ಗಿರಿನಾಥ್ ಅವರು ಬುಧವಾರ ಸಮರ್ಥಿಸಿಕೊಂಡಿದ್ದಾರೆ.
ಈ ಹಿಂದೆ ಪಾರ್ಕಿಂಗ್ ಶುಲ್ಕ ಎಂದು ಶೇ.50 ರಷ್ಟು ಹಣ ಕಟ್ಟಲಾಗುತ್ತಿತ್ತು. ಈಗ ಅದು ಜಾಸ್ತಿಯಿದೆ ಎಂದು ಆಕ್ಷೇಪಗಳು ಕೇಳಿಬಂದಿವೆ. ಹಿಂದೆ ಜೋನ್ ಗಳ ಆಧಾರದ ಮೇಲೆ ಶುಲ್ಕ ನಿಗದಿಯಾಗಿತ್ತು. ಆಗ ನಮಗೆ 211 ಕೋಟಿ ರೂ.ಗಳ ಅದಾಯ ಬರುತ್ತಿತ್ತು. ಆದರೆ, ಹೊಸ ಪದ್ದತಿಯಿಂದ 43 ಕೋಟಿ ಅಷ್ಟು ಆದಾಯ ಕಡಿಮೆಯಾಗುತ್ತಿದೆ. ನಮಗೆ ಕೋಟಿ ಕೋಟಿ ಹೊರೆಯಾದರೂ ಕೂಡ ಜನರಿಗೆ ಸಹಾಯವಾಗಲಿ ಎಂದು ಹೊಸ ವ್ಯವಸ್ಥೆ ಮಾಡಿದ್ದೇವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದರು.
ಒಂದೇ ರೀತಿಯ ಶುಲ್ಕವನ್ನು ಜಾರಿಗೆ ತಂದಿರುವುದರಿಂದ ವಸತಿ ಪ್ರದೇಶದವರಿಗೆ ಹೆಚ್ಚಾಗುತ್ತದೆ ಎಂಬುದಾದರೆ ಅವರು ಆಕ್ಷೇಪಣೆ ಸಲ್ಲಿಸಲಿ. ಯಾರಿಗೂ ಹೆಚ್ಚಾಗುವುದಿಲ್ಲ ಎಂಬುದು ನಮ್ಮ ಭಾವನೆ. ಎಲ್ಲವೂ ಸರಿ ಇದೆ ಎಂದೇನೂ ಹೇಳುವುದಿಲ್ಲ. ನಮ್ಮ ಮೇಲೆ ಸರ್ಕಾರ ಇದೆ, ಮುಖ್ಯಮಂತ್ರಿ ಇದ್ದಾರೆ, ಉಪ ಮುಖ್ಯಮಂತ್ರಿ ಇದ್ದಾರೆ, ನಗರಾಭಿವೃದ್ಧಿ ಇಲಾಖೆ ಇದೆ. ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಸ ಸಂಗ್ರಹ ತೆರಿಗೆ ವಿಚಾರವಾಗಿ ಮಾತನಾಡಿ, 1986ರ ಪರಿಸರ ಸಂರಕ್ಷಣೆ ಕಾಯ್ದೆಯಲ್ಲಿ ಬೈಲಾ ಇದೆ. ಬಿಬಿಎಂಪಿಯಲ್ಲಿ 2020ರಲ್ಲಿ ಬೈಲಾ ಮಾಡಿ, ತ್ಯಾಜ್ಯ ಉತ್ಪತಿಯ ಮೇಲೆ ರೇಟ್ ನಿಗದಿ ಮಾಡಿದ್ದೇವೆ ಎಂದು ತಿಳಿಸಿದರು.