ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ವರ್ಷಕ್ಕೆ 1 ಲಕ್ಷ ಕೋಟಿ ರೂ. ಸಾಲ ಮಾಡಿದ ಏಕೈಕ ಸಿಎಂ ಸಿದ್ದರಾಮಯ್ಯ ಆಗಿದ್ದಾರೆ. ಸರ್ಕಾರ ಪಾಪರ್ ಆಗಿದೆ. ಖಜಾನೆ ತುಂಬಾ ಹೆಗ್ಗಣ ತುಂಬಿವೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಸರ್ಕಾರವನ್ನ ಲೇವಡಿ ಮಾಡಿದ್ದಾರೆ.
ಮಂಡ್ಯ ವಿಶ್ವವಿದ್ಯಾಲಯ ಉಳಿವಿಗಾಗಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಯಾವುದೇ ಹಳ್ಳಿಗಳಿಗೆ ಹೋದರು ಒಂದು ಶಾಲೆ ಕೊಡಿ ಎನ್ನುತ್ತಾರೆ ಆದರೆ, ಮಂಡ್ಯದಲ್ಲಿ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯ ಉಳಿಸಿಕೊಳ್ಳೋಕಾಗುತ್ತಿಲ್ಲ. ಈಗಾಗಲೇ ಸರ್ಕಾರ ಕೊಟ್ಟಿರುವುದನ್ನ ಕಿತ್ತುಕೊಳ್ಳುತ್ತಿದೆ. ಇದಕ್ಕೆ ತಿರುಗಿ ಬೀಳಬೇಕು ಎಂದರು.
ಮಂಡ್ಯದಲ್ಲೇ ವಿಶ್ವವಿದ್ಯಾಲಯ ಇದ್ದರೆ ನಮ್ಮ ವಿದ್ಯಾರ್ಥಿಗಳು ಮೈಸೂರಿಗೆ ಹೋಗುವುದು ತಪ್ಪುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ವಿದ್ಯೆ ಕಿತ್ತುಕೊಂಡಿತು ಎಂದು ಜನ ಹೇಳುತ್ತಾರೆ. ಮಂಡ್ಯದ 6 ಜನ ಕಾಂಗ್ರೆಸ್ ಶಾಸಕರಿಗೆ ಒಂದು ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲವಾದರೆ, ಅವರು ಏಕಿರಬೇಕು? ಎಂದು ಕಿಡಿಕಾರಿದರು.
ಅಬಕಾರಿ ಸಚಿವರು ಮುಚ್ಚಿರುವ ಬಾರ್ ಓಪನ್ ಮಾಡುತ್ತಾರೆ. ಆದರೆ, ಮಂಡ್ಯದಲ್ಲಿ ಶಿಕ್ಷಣಕ್ಕಾಗಿ ಆರಂಭಿಸಿದ ವಿಶ್ವವಿದ್ಯಾಲಯವನ್ನು ಸರ್ಕಾರ ಮುಚ್ಚುತ್ತಿದೆ. ಈ ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮಾರ್ಯಾದೆ ಇದ್ಯಾ? ಎಂದು ಪ್ರಶ್ನಿಸಿದ್ದಾರೆ.