ಹೊಸ ದಿಗಂತ ವರದಿ,ಮೈಸೂರು:
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಲಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳವಾರ ಸಂಜೆ ನಗರ ಲಲಿತಮಹಲ್ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕುರಿತು ಈಗಾಗಲೇ ನಾನು ಮುಖ್ಯಮಂತ್ರಿಗಳೊoದಿಗೆ ಮಾತನಾಡಿದ್ದೇನೆ. ಸೂಕ್ತ ತನಿಖೆ ನಡೆಸುವಂತೆ, ಇದಕ್ಕಾಗಿ ಸಮಿತಿಯೊಂದನ್ನು ರಚಿಸುವಂತೆ ಆಗ್ರಹಿಸಿದ್ದೇನೆ. ಘಟನೆಯ ಬಗ್ಗೆ ಸರ್ಕಾರ ಪೂರ್ವ ಪರ ಮಾಹಿತಿಗಳನ್ನು ಪಡೆಯಲಿದೆ. ಸೂಕ್ತ ತನಿಖೆಯನ್ನು ನಡೆಸಿ, ವರದಿಯನ್ನು ಪಡೆಯಲಿದೆ. ತಪ್ಪಿತಸ್ಥರು ಯಾರೇ ಆಗಿರಲಿ, ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಂತೋಷ್ ಆತ್ಮಹತ್ಯೆ ಪ್ರಕರಣದ ವರದಿ ಬರುವ ತನಕ,ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಯಾವುದೇ ಕ್ರಮಗೊಳ್ಳುವುದಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯುವುದಿಲ್ಲ ಎಂದು ಹೇಳಿದರು.
ಬೆಂಕಿ ಹಚ್ಚಿ ಲಾಭಪಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ; ಎಲ್ಲಾ ಚುನಾವಣೆಗಳಲ್ಲೂ ಸೋತು ಸುಣ್ಣವಾಗಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ನಿರಂತರವಾಗಿ ಇಲ್ಲ, ಸಲ್ಲದ ಆರೋಪಗಳನ್ನು ಮಾಡುತ್ತಾ, ಗೊಂದಲ ಸೃಷ್ಠಿಸುವ ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ನಾಯಕರು ಮಾಡುತ್ತಿರುವ ಯಾವುದೇ ಆರೋಪಗಳಲ್ಲಿ ಯಾವುದೇ ಸ್ಪಷ್ಟತೆಯಿಲ್ಲ. ಸುಳ್ಳು ಅಪಪ್ರಚಾರ ಮಾಡುವುದು ಕಾಂಗ್ರೆಸ್ ನಾಯಕರ ಚಾಳಿಯಾಗಿದೆ. ರಾಜ್ಯದಲ್ಲಿ ನಡೆಯುವ ಘಟನೆ, ಪ್ರಕರಣಗಳಲ್ಲಿ ಬೆಂಕಿ ಹಚ್ಚಿ, ಲಾಭ ಪಡೆಯುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪರನ್ನು ಬದಲಾಯಿಸುತ್ತಾರೆ ಎಂದು ಸುಳ್ಳು ಅಪಪ್ರಚಾರ ಮಾಡುತ್ತಿದ್ದರು. ಆದರೆ ಯಡಿಯೂರಪ್ಪ ಮೂರು ವರ್ಷ ಅಧಿಕಾರ ನಡೆಸಿದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುತ್ತಿದ್ದಂತೆ, ಅವರ ಮೇಲೆಯೂ ಇಲ್ಲ, ಸಲ್ಲದ ಆರೋಪಗಳನ್ನು ಮಾಡುತ್ತಾ ಬಂದರು. ಈಗಲೂ ಮಾಡುತ್ತಿದ್ದಾರೆ. ನಾನು ಪಕ್ಷದ ಅಧ್ಯಕ್ಷನಾದ ಬಳಿಕ, ನನ್ನನ್ನೂ ಬದಲಾಯಿಸುತ್ತಾರೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದರು. ಆದರೆ ನಾನು ಕೂಡ ಪಕ್ಷದ ಅಧ್ಯಕ್ಷನಾಗಿ ಮೂರು ವರ್ಷಗಳ ಅವಧಿಯನ್ನು ಪೂರೈಸುತ್ತಿದ್ದೇನೆ ಎಂದರು.
ಕಾoಗ್ರೆಸ್ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತೆ; ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ. ಆ ಪಕ್ಷಕ್ಕೆ ಕಾರ್ಯಕರ್ತರೂ ಸರಿಯಾಗಿ ಇಲ್ಲ, ಆ ಪಕ್ಷದ ನಾಯಕರ ಭೌದ್ಧಿಕತೆಯೂ ಸರಿಯಾಗಿಲ್ಲ, ಎಲ್ಲದರ ಕೊರತೆಯಿಂದ ಬಳಲುತ್ತಿರುವ ಕಾಂಗ್ರೆಸ್ ನಾಯಕರು, ವಿಧಾನಸಭೆಯಲ್ಲಿ ವಿಷಯಗಳಿದ್ದರೂ ಮಾತನಾಡಲು ಹೆದರುತ್ತಿದ್ದರು. ಕಾಂಗ್ರೆಸ್‌ನವರು ಏನೇ ಅಪಪ್ರಚಾರ ಮಾಡಿದರೂ, ಸುಳ್ಳು ವದಂತಿಗಳನ್ನು ಹಬ್ಬಿಸಿದರೂ, ನಾವು ಸತ್ಯಾಸತ್ಯೆಯನ್ನು ನೋಡುತ್ತಿರುತ್ತೇವೆ ಎಂದು ಟಾಂಗ್ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರುಗಳಾದ ಕೆ.ಎಸ್.ಈಶ್ವರಪ್ಪ ಗೋಪಾಲಯ್ಯ, ನಾರಾಯಣಗೌಡ, ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್, ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಉಪಾಧ್ಯಕ್ಷ ರಾಜೇಂದ್ರ, ಮೈಸೂರು ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷೆ ಮಂಗಳಸೋಮಶೇಖರ್, ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ಮೈಸೂರು ಸಹ ವಕ್ತಾರ ವಸಂತ್‌ಕುಮಾರ್, ಮಾಧ್ಯಮ ಪ್ರಮುಖರಾದ ಮಹೇಶ್ ರಾಜೇ ಅರಸ್, ಕೇಬಲ್ ಮಹೇಶ್, ಪ್ರದೀಪ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.