ಕೇರಳಕ್ಕೆ ಅಕ್ರಮ ರಸಗೊಬ್ಬರ ಸಾಗಾಟ: ಮಾಲು ಸಹಿತ ಲಾರಿ ವಶ

ಹೊಸ ದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕೃಷಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದು, 300 ಚೀಲ ಗೊಬ್ಬರ ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಕುಶಾಲನಗರದ ಕೈಗಾರಿಕಾ ಬಡಾವಣೆಯ ಮರದ ಮಿಲ್ ಒಂದರ ಆವರಣದಲ್ಲಿ ಸೋಮವಾರ ರಾತ್ರಿ ಲಾರಿಯೊಂದಕ್ಕೆ ಬೇರೆ ಎರಡು ವಾಹನಗಳಲ್ಲಿ ತಂದಿದ್ದ ಯೂರಿಯಾ ರಸಗೊಬ್ಬರವನ್ನು ತುಂಬುತ್ತಿದ್ದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ಮಡಿಕೇರಿ ಕಡೆಗೆ ಹೊರಟ ಲಾರಿಯನ್ನು ಹಿಂಬಾಲಿಸಿದ ಅಧಿಕಾರಿಗಳು ನಗರ ಠಾಣಾ ಪೊಲೀಸರ ಸಹಕಾರ ಪಡೆದು ನಗರದ ಫೀ.ಮಾ.ಕಾರ್ಯಪ್ಪ ವೃತ್ತದ ಬಳಿ ಲಾರಿಯನ್ನು ತಡೆದು ಪರಿಶೀಲಿಸಿದಾಗ ಯೂರಿಯಾ ರಸಗೊಬ್ಬರ ಇರುವುದು ಕಂಡು ಬಂದಿದೆ.
ಚಾಲಕ ನೀಡಿದ ಬೆಂಗಳೂರು ಬಯಪ್ಪನ ಹಳ್ಳಿಯ ಜಮೀರ್ ಟ್ರೇಡರ್ಸ್’ನ ಬಿಲ್’ನಲ್ಲಿ ಯೂರಿಯಾ ಬದಲು “ನೈಟ್ರೋಜಿಯಸ್ ಕೆಮಿಕಲ್ ಕಾಂಪೌಂಡ್” 10 ಟನ್’ನ್ನು ಸರಬರಾಜು ಮಾಡುವ ಕುರಿತು ನಮೂದಿಸಲಾಗಿತ್ತು. ಇದರಿಂದ ಯೂರಿಯಾ ರಸಗೊಬ್ಬರ ಅಕ್ರಮವಾಗಿ ಸಾಗಾಟವಾಗುತ್ತಿರುವುದು ಖಾತ್ರಿಗೊಂಡು ಗೊಬ್ಬರ ಸಹಿತ ಲಾರಿಯನ್ನು ನಗರ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.
ಸಹಾಯಕ ಕೃಷಿ ನಿರ್ದೇಶಕ ರಿಯಾಜ್ ಅಹಮದ್ ಷರೀಫ್ ಅವರು ನಗರ ವೃತ್ತ ನಿರೀಕ್ಷಕರಿಗೆ ದೂರು ನೀಡಿದ್ದು, ಪ್ರಕರಣದ ಕುರಿತು ತನಿಖೆ ನಡೆಸುವಂತೆ ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!