August 27, 2026
Thursday, August 27, 2026
spot_img

ಆರ್‌ಎಸ್‌ಎಸ್ ದೇಶಪ್ರೇಮಕ್ಕೆ ಸರ್ಕಾರದ ಉತ್ತರವೇ ಸಾಕ್ಷಿ: ಗೃಹ ಸಚಿವರ ಹೇಳಿಕೆ ಸ್ವಾಗತಿಸಿದ ಸಿದ್ದಲಿಂಗ ಸ್ವಾಮಿ

ಹೊಸದಿಗಂತ ವರದಿ ಕಲಬುರಗಿ:

ಆರ್‌ಎಸ್‌ಎಸ್ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಸದನದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಉತ್ತರ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದಾಗಿದೆ ಎಂದು ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಆರ್‌ಎಸ್‌ಎಸ್ ವಿರುದ್ಧ ಪ್ರಕರಣಗಳ ಕುರಿತು ವಿಪಕ್ಷಗಳು ಸದನದಲ್ಲಿ ಕೇಳಿದ ಪ್ರಶ್ನೆಗೆ ಗೃಹ ಸಚಿವರು ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಉತ್ತರಿಸಿರುವುದು ಸಂಘಟನೆಯ ನಿಷ್ಕಳಂಕ ಕಾರ್ಯಚಟುವಟಿಕೆಗಳಿಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಯಾವ ಸಂಘಟನೆಯನ್ನು ಕೆಲವರು ನಿರಂತರವಾಗಿ ಟೀಕಿಸುತ್ತಿದ್ದರೋ, ಆರೋಪ ಮಾಡುತ್ತಿದ್ದರೋ, ಅದೇ ಸಂಘಟನೆಯ ಕುರಿತು ಸರ್ಕಾರದ ಪರವಾಗಿ ಗೃಹ ಸಚಿವರು ನೀಡಿರುವ ಉತ್ತರವೇ, ಆರ್‌ಎಸ್‌ಎಸ್ ಎಷ್ಟು ಪವಿತ್ರ ಮತ್ತು ದೇಶಭಕ್ತಿಯ ಸಂಘಟನೆಯಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

ದೇಶಭಕ್ತಿ ಮತ್ತು ರಾಷ್ಟ್ರಸೇವೆಯ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕಾರಣ ಆರ್‌ಎಸ್‌ಎಸ್ ವಿರುದ್ಧ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ. ಈ ದೇಶದಲ್ಲಿ ನಿಷ್ಕಳಂಕ ಸಂಘಟನೆ ಯಾವುದಾದರೂ ಇದ್ದರೆ ಅದು ಆರೆಸ್ಸೆಸ್ ಎಂದು ಹೇಳಬಹುದು. ಆ ಸಂಘಟನೆಗೆ ಸರ್ಟಿಫಿಕೇಟ್ ನೀಡಿದವರು ಯಾರಾದರೂ ಇದ್ದರೆ ಅದು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಎಂದ ಅವರು, ಸದನದಲ್ಲಿ ವಿಪಕ್ಷಗಳು ಕೇಳಿದ ಪ್ರಶ್ನೆಗೆ ಗೃಹ ಸಚಿವರು ನೀಡಿರುವ ಉತ್ತರವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶಿವಸೇನಾ ಜಿಲ್ಲಾಧ್ಯಕ್ಷ ಗುರುಶಾಂತ ಟೆಂಗಳಿ, ಮಲಕಣ್ಣ ಹಿರೇಪೂಜಾರಿ, ಶಿವರಾಜ್ ಬಾಳ್ಳಿ, ಮಹಾಂತಗೌಡ ಆಂದೋಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !