ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡವೊಂದು ರೈತನ ಬದುಕಿಗೆ ಆಘಾತ ನೀಡಿದೆ. ಜಾನುವಾರುಗಳ ಹಸಿವು ನೀಗಿಸಲು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಭತ್ತದ ಒಣ ಹುಲ್ಲಿನ ಮೆದೆ ಬೆಂಕಿಗೆ ಆಹುತಿಯಾಗಿದೆ.
ಅಕ್ಕಿಹೆಬ್ಬಾಳು ಗ್ರಾಮದ ನಿವಾಸಿ ಶ್ರೀನಿವಾಸ್ ಎಂಬುವವರು ತಮ್ಮ ಜಾನುವಾರುಗಳಿಗೆ ಮೇವಿನ ಕೊರತೆಯಾಗಬಾರದೆಂಬ ಉದ್ದೇಶದಿಂದ ಸುಮಾರು 1 ಲಕ್ಷ ರೂಪಾಯಿ ವೆಚ್ಚ ಮಾಡಿ ಭತ್ತದ ಒಣ ಹುಲ್ಲನ್ನು ಖರೀದಿಸಿದ್ದರು. ಖರೀದಿಸಿದ ಹುಲ್ಲನ್ನು ತಮ್ಮ ಮನೆಯ ಸಮೀಪವೇ ದೊಡ್ಡ ಮೆದೆಯನ್ನಾಗಿ ನಿರ್ಮಿಸಿ ಸುರಕ್ಷಿತವಾಗಿ ಸಂಗ್ರಹಿಸಿದ್ದರು.
ಆದರೆ, ಕಳೆದ ರಾತ್ರಿ ದುರದೃಷ್ಟವಶಾತ್ ಹುಲ್ಲಿನ ಮೆದೆಗೆ ಬೆಂಕಿ ಹೊತ್ತಿಕೊಂಡಿದೆ. ಒಣ ಹುಲ್ಲಾದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಮೆದೆಯನ್ನು ಆವರಿಸಿಕೊಂಡಿದ್ದು, ಅಗ್ನಿಯ ಕೆನ್ನಾಲಿಗೆಗೆ ಇಡೀ ರಾಶಿ ಸುಟ್ಟು ಭಸ್ಮವಾಗಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರಾದರೂ, ಅಷ್ಟರಲ್ಲಾಗಲೇ ಹುಲ್ಲು ಸಂಪೂರ್ಣವಾಗಿ ಕರಕಲಾಗಿತ್ತು.
ಈ ದುರ್ಘಟನೆಯಿಂದ ಶ್ರೀನಿವಾಸ್ ಅವರು ಆರ್ಥಿಕವಾಗಿ ಭಾರಿ ನಷ್ಟ ಅನುಭವಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ತಗುಲಲು ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.



