ಗ್ಯಾರಂಟಿ ಯೋಜನೆ ಕದ್ದು ಮುಚ್ಚಿ ತೆಗೆದುಕೊಂಡಿರುವ ತೀರ್ಮಾನವೇನಲ್ಲ: ಸಚಿವ ಡಾ.ಜಿ.ಪರಮೇಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರ ಸಂಪೂರ್ಣವಾಗಿ ಮುಖ್ಯಮಂತ್ರಿಗಳಿಗೆ ಬಿಟ್ಟಿರುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕೆಪಿಸಿಸಿ ಅಧ್ಯಕ್ಷರೊಂದಿಗೆ ಸಮಾಲೋಚನೆ ಮಾಡಿಕೊಂಡು ಮಾಡುವ ಪದ್ಧತಿ ಇದೆ. ಹೈಕಮಾಂಡ್‌ನೊಂದಿಗೆ ಚರ್ಚೆ ಮಾಡಿ, ಅವರಿಬ್ಬರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಎರಡು ಗ್ಯಾರಂಟಿ ಯೋಜನೆ ನಿಲ್ಲಿಸುವಂತೆ ಶಾಸಕ ಗವಿಯಪ್ಪ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಪಕ್ಷ ಮತ್ತು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಯಾರಿಗೂ ಗೊತ್ತಿಲ್ಲದೇ ಕದ್ದು ಮುಚ್ಚಿ ತೆಗೆದುಕೊಂಡಿರುವ ತೀರ್ಮಾನವೇನಲ್ಲ. ಚುನಾವಣೆಗೂ ಮೊದಲೇ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಜನಸಮುದಾಯ ನಮ್ಮನ್ನು ನಂಬಿ ಮತ ಚಲಾಯಿಸಿರಬಹುದು. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದು ನಮ್ಮ ಕರ್ತವ್ಯ. ನಮ್ಮನಮ್ಮ ಅಭಿಪ್ರಾಯಗಳು ಬೇರೆ ಇರಬಹುದು. ನಾವು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು. ಯಾವುದೇ ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಕೇಳುವುದರಲ್ಲಿ ತಪ್ಪಿಲ್ಲ ಎಂದರು.

ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಿಂತಿಲ್ಲ. ಹಿಂದಿನ ಸರ್ಕಾರ ಲಕ್ಷಾಂತರ ಕೋಟಿ ರೂ. ಬಿಲ್ ಬಾಕಿ ಉಳಿಸಿ ಹೋಗಿತ್ತು. ಅದನ್ನೆಲ್ಲ ನಾವು ಭರಿಸಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ 56,000 ಕೋಟಿ ರೂ. ಹೆಚ್ಚುವರಿ ಖರ್ಚಾಗಿದೆ. ಬಜೆಟ್ ಅಮೌಂಟ್ 3.27 ಲಕ್ಷ ಕೋಟಿಯಿಂದ, 3.75 ಲಕ್ಷ ಕೋಟಿಗೆ ಹೆಚ್ಚಾಗಿದೆ. ಮುಂದಿನ ವರ್ಷಕ್ಕೆ ಗ್ಯಾರಂಟಿ ಯೋಜನೆಗಳಿಗೆ ಕೊಟ್ಟರು, ಹೆಚ್ಚಿನ ಹಣ ದೊರಕುತ್ತದೆ ಎಂದರು.

ಕೇಂದ್ರ ಸರ್ಕಾರ ನಮಗೆ ಬರಬೇಕಾದ ಹಣವನ್ನು ಸರಿಯಾಗಿ ನೀಡುತ್ತಿಲ್ಲ. ಒತ್ತಾಯ ಮಾಡಿ ಹಣ ತಂದು, ಸಂಪನ್ಮೂಲ ಕ್ರೂಢೀಕರಣವನ್ನು ಜಾಸ್ತಿ ಮಾಡಲಾಗಿದೆ. ಹಣಕಾಸಿನ ಸ್ಥಿತಿಗತಿಯನ್ನು ಬ್ಯಾಲೆನ್ಸ್ ಮಾಡಲು ಮುಖ್ಯಮಂತ್ರಿಗಳು ಕ್ಯಾಬಿನೆಟ್‌ನಲ್ಲಿ ಎರಡು ಬಾರಿ ನಮಗೆಲ್ಲ ಹೇಳಿದ್ದಾರೆ. ಯಾವುದೂ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ವ್ಯವಸ್ಥೆ ಸರಿ ಇಲ್ಲದಿರುವ ಕುರಿತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಮಾತನಾಡುತ್ತೇನೆ. ಎರಡು ಬಾರಿ ಜೈಲುಗಳ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ನುಡಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!