ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣ ದರವನ್ನು ಏರಿಕೆ ಮಾಡಿದ್ದ ಪರಿಣಾಮ ನಮ್ಮ ಮೆಟ್ರೋಗೆ ಪ್ರಯಾಣಿಕರ ಅಸಮಾಧಾನದ ಬಿಸಿ ತಟ್ಟಿದೆ. ದುಬಾರಿ ಮೆಟ್ರೋ ಪ್ರಯಾಣವನ್ನು ಬಹಿಷ್ಕರಿಸಿ, ನಿಗದಿತ ಸ್ಥಳಗಳಿಗೆ ತೆರಳಲು ಪರ್ಯಾಯ ಆಯ್ಕೆಗಳನ್ನು ಹುಡುಕಿಕೊಂಡಿದ್ದಾರೆ.
ಫೆ.11 ರಂದು ಒಂದೇ ದಿನ ಸುಮಾರು 80 ಸಾವಿರದಷ್ಟು ಪ್ರಯಾಣಿಕರ ಸಂಖ್ಯೆಯ ಕುಸಿತವನ್ನು ಮೆಟ್ರೋ ದಾಖಲಿಸಿದೆ.
ಮೆಟ್ರೋ ಪ್ರಯಾಣ ದರ ಏರಿಕೆಯ ನಂತರ 7,78,774 ಮಂದಿ ಪ್ರಯಾಣಿಕರಿದ್ದಾರೆ. ಫೆ.4 ರಂದು 8,58,417 ಮಂದಿ ಪ್ರಯಾಣಿಸಿದ್ದರು. ಪ್ರಯಾಣಿಕರ ಸಂಖ್ಯೆ ಫೆ.10 ರಂದು 8,28,149 ರಷ್ಟಿತ್ತು. ಒಟ್ಟಾರೆ 79,643 ಮಂದಿ ಒಂದೇ ದಿನದಲ್ಲಿ ಮೆಟ್ರೋ ಪ್ರಯಾಣವನ್ನು ತೊರೆದಿದ್ದಾರೆ.
ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಸ್ವತಃ ಮೆಟ್ರೋ ಸಿಬ್ಬಂದಿಗಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಯಾಣ ದರದಲ್ಲಿ ಭಾರಿ ಏರಿಕೆಯಾಗಿರುವುದರಿಂದ ನಾನು ಮೆಟ್ರೋ ನಲ್ಲಿ ಕಚೇರಿಗೆ ಬರುವುದನ್ನು ನಿಲ್ಲಿಸಿದ್ದೇನೆ. ಯಾವ ಆಧಾರದಲ್ಲಿ ಬೆಲೆ ಏರಿಕೆ ಮಾಡಿದ್ದಾರೆ ಎಂಬುದು ನಮಗೂ ಅರ್ಥವಾಗುತ್ತಿಲ್ಲ. ನಾನು ದ್ವಿಚಕ್ರವಾಹನದಲ್ಲಿ ಕಚೇರಿಗೆ ಆಗಮಿಸಿದರೆ ಹಣ ಉಳಿಯುತ್ತದೆ. ಶೇ.46 ರಷ್ಟು ಏರಿಕೆ ಎಂದು ಹೇಳಲಾಗುತ್ತಿದೆ. ಆದರೆ ಶೇ.100 ಕ್ಕಿಂತ ಹೆಚ್ಚು ಏರಿಕೆಯಾಗಿದೆ. ದಿನಕ್ಕೆ 100 ರೂಪಾಯಿ ಕೇವಲ ಪ್ರಯಾಣಕ್ಕೆ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಮೆಟ್ರೋ ಸಿಬ್ಬಂದಿಗಳೇ ಮಾಧ್ಯಮಗಳೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.