Saturday, April 1, 2023

Latest Posts

ಕಾಂಗೋದಲ್ಲಿ ಶಾಂತಿಸ್ಥಾಪನೆಗೆ ಪ್ರಾಣಾರ್ಪಣೆ ಮಾಡಿದ ‘ಪರಮ ವೀರ’ನ ಶೌರ್ಯಗಾಥೆ

– ಗಣೇಶ ಭಟ್, ಗೋಪಿನಮರಿ

ಜಗತ್ತು ಭಾರತವನ್ನು ಶಾಂತಿಯ ಪ್ರತೀಕವನ್ನಾಗಿ ನೋಡುತ್ತದೆ. ಪ್ರಾಚೀನಕಾಲದಿಂದಲೂ‌ ಭಾರತ ಜಗತ್ತಿಗೆ ನೀಡಿದ ಶ್ರೇಷ್ಠ ಕೊಡುಗೆಯೆಂದರೆ ಅದು ಶಾಂತಿಯ ಮಾರ್ಗ. ಜಗತ್ತಿನೆಲ್ಲೆಡೆ ಧರ್ಮ ಯುದ್ಧಗಳು‌ ನಡೆಯುತ್ತಿದ್ದ ಸಮಯದಲ್ಲಿ ಗೌತಮ ಬುದ್ಧನ ಮೂಲಕ ಕರುಣೆ, ಪ್ರೀತಿಯ ಸಂದೇಶವನ್ನು ಜಗತ್ತಿಗೇ ಸಾರಿತ್ತು ಭಾರತ. ಆಧುನಿಕ ಯುಗ ಆರಂಭವಾದ ಮೇಲೆಯೂ ವಿಶ್ವಶಾಂತಿಗೆ ಭಾರತದ ಕೊಡುಗೆ ಅನನ್ಯವಾದುದು. ಎರಡೆರಡು ವಿಶ್ವಯುದ್ಧಗಳು ನಡೆದು ಜಗತ್ತು ಎರಡು ಧ್ರುವಗಳಾಗಿ ವಿಭಜನೆಗೊಂಡು ಮತ್ತೊಂದು ಜಾಗತಿಕ ಸಮರಕ್ಕೆ ಸಜ್ಜಾಗುತ್ತಿದ್ದ ಸಮಯದಲ್ಲಿ ಹಿಂದುಳಿದ ರಾಷ್ಟ್ರಗಳನ್ನೆಲ್ಲ ತನ್ನೊಂದಿಗೆ ಸೇರಿಸಿಕೊಂಡು ‘ಶಾಂತಿಸಂದೇಶವನ್ನು’ ಮತ್ತೊಮ್ಮೆ ಎತ್ತಿ ಹಿಡಿದಿತ್ತು ಭಾರತ. ಆದರೂ ಜಗತ್ತಿನ ಹಲವೆಡೆ ಅಂತರ್ಯುದ್ಧಗಳು ನಡೆದು ಜನಸಾಮಾನ್ಯರಿಗೆ ತೊಂದರೆಯಾಗಿ ವಿಶ್ವಶಾಂತಿಗೆ ಧಕ್ಕೆಯುಂಟಾದಾಗ ತನ್ನ ಸೇನೆಯನ್ನು ಕಳುಹಿಸಿ ಬಂಡುಕೋರರನ್ನು ಮಟ್ಟಹಾಕಿ ಶಾಂತಿಸ್ಥಾಪನೆಗೆ ಭಾರತ ಕೊಡುಗೆ ನೀಡಿದೆ‌. ‘ಅಂಹಿಸಾ ಪರಮೋಧರ್ಮಃ, ಧರ್ಮಹಿಂಸಾ ತಥೈವ ಚ’ ಎಂದೇ ಅಲ್ಲವೇ ಶ್ರೀಕೃಷ್ಣ ಹೇಳಿದ್ದು. ಇಲ್ಲಿ‌ ಧರ್ಮವೆಂದರೆ ‘ಶಾಂತಿ’ ಮಾತ್ರ. ಇಂದಿಗೂ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಭಾರತದ ಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತವೆ. ಇದುವರೆಗೂ ವಿಶ್ವಶಾಂತಿಯ ಕಾರ್ಯಾಚರಣೆಯಲ್ಲಿ 1,95,000 ದಷ್ಟು ಭಾರತೀಯ ಸೈನಿಕರು ಪ್ರಾಣಾರ್ಪಣೆ ಮಾಡಿದ್ದಾರೆ. ನೀವೀಗ ಓದ ಹೊರಟಿರೋದು ಅಂಥಹ ಶಾಂತಿಪಾಲನಾ‌ ಕಾರ್ಯಾಚರಣೆಯಲ್ಲಿ ರಾಕ್ಷಸೀಯ ಶಕ್ತಿಗಳನ್ನು ಮಟ್ಟಹಾಕಲು ಪ್ರಾಣತೆತ್ತ ‘ಪರಮವೀರ’ನ ಬಗ್ಗೆ..

ಆತನ ಹೆಸರು ಕ್ಯಾಪ್ಟನ್ ಗುರುಬಚನ್ ಸಿಂಗ್ ಸಲಾರಿಯಾ. ಆಫ್ರಿಕೆಯ ಕಾಂಗೋದಲ್ಲಿ ಅಂತರ್ಯುದ್ಧದ ಕ್ರೌರ್ಯ ಮಿತಿ ಮೀರಿದಾಗ ವಿಶ್ವಸಂಸ್ಠೆಯು ಶಾಂತಿ ಸ್ಥಾಪನೆಗೆ ತನ್ನ‌ ಪಡೆಗಳನ್ನು‌ ಕಳುಹಿಸಿತು. ಆ ಪಡೆಯಲ್ಲಿ ಭಾರತೀಯ ಸೇನೆಯನ್ನು ಪ್ರತಿನಿಧಿಸಿದ್ದ ಗುರುಬಚನ್ ಸಿಂಗ್ ಸಲಾರಿಯಾ ಶಾಂತಿಕೆಡಿಸುವವರ ಪಾಲಿಗೆ ಸಿಂಹಸ್ವಪ್ನನಾಗಿಬಿಟ್ಟ.

1935ರಲ್ಲಿ ಪಂಜಾಬಿನ ಜಮ್ವಾಲ್ ಎಂಬ ಹಳ್ಳಿಯಲ್ಲಿ‌ ಜನಿಸಿದ ಗುರು ಬಚನ್ ಸಿಂಗ್ ನಂತರದಲ್ಲಿ ಕುಟುಂಬದೊಂದಿಗೆ ಗುರುದಾಸ್ಪುರದಲ್ಲಿ ನೆಲೆಸಿದ. ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ಶಿಕ್ಷಣ ಪಡೆದ ನಂತರ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಕಲಿತು ಭಾರತೀಯ ಸೇನೆಯ ಅತಿಪ್ರಸಿದ್ಧ ರೆಜಿಮೆಂಟುಗಳಲ್ಲೊಂದಾದ ‘ಗೂರ್ಖಾ ರೆಜಿಮೆಂಟ್’ ನಲ್ಲಿ ಸ್ಥಾನ ಪಡೆಯುತ್ತಾನೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ನಿಯುಕ್ತಿಗೊಂಡ ಭಾರತೀಯ ಸೇನೆಯ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಯೊಂದಿಗೆ 1961ರಲ್ಲಿ ಆಫ್ರಿಕಾದ ಕಾಂಗೋ ಗೆ ತೆರಳುತ್ತಾನೆ.

1961 ರಲ್ಲಿ ಬೆಲ್ಜಿಯಂ ವಸಾಹತುವಾಗಿದ್ದ ಕಾಂಗೋ ಸ್ವಾತಂತ್ರ್ಯ ಪಡೆದಿತ್ತು. ಆದರೆ ಅಲ್ಲಿನ ತನ್ನ ಯುರೋಪಿಯನ್ ಪ್ರಜೆಗಳನ್ನು ರಕ್ಷಿಸುವ ನೆಪದಲ್ಲಿ ಬೆಲ್ಜಿಯಂ‌ ತನ್ನ ಸೇನೆಯನ್ನು ನಿಯೋಜಿಸಿದ ಪರಿಣಾಮ ಕಾಂಗೋದ ಪಡೆಗಳು ಹಾಗು ವಿದೇಶಿ ಬೆಲ್ಜಿಯಂ ಪಡೆಗಳ ನಡುವೆ ಯುದ್ಧ ಏರ್ಪಟ್ಱಿತ್ತು. ಬಂಡುಕೋರರು ಹಾಗು ಬೆಲ್ಜಿಯಂ ಪಡೆಗಳಿಂದಾಗಿ ಕಾಂಗೋದಲ್ಲಿ‌‌ ಹಿಂಸೆ ಮಿತಿಮೀರಿದಾಗ ಕಾಂಗೋದ ಪ್ರಧಾನಿ ವಿಶ್ವ ಸಂಸ್ಥೆಯಲ್ಲಿ ಸಹಾಯಕ್ಕಾಗಿ ಮೊರೆಯಿಟ್ಟರು. ವಿಶ್ವ ಸಂಸ್ಥೆ ಕಾಂಗೋದ ಪರವಾಗಿ, ಬೆಲ್ಜಿಯಂ ಪಡೆಗಳನ್ನು ಹಿಮ್ಮೆಟ್ಟಿಸುವ ಹಾಗು ಬಂಡುಕೋರರನ್ನು ಮಟ್ಟಹಾಕಿ ‘ಸಿವಿಲ್ ವಾರ್’ (ಅಂತರ್ಯುದ್ಧ) ತಡೆಯುವ ಉದ್ದೇಶದೊಂದಿಗೆ ತನ್ನ ಶಾಂತಿಪಾಲನಾ ಪಡೆಯನ್ನು ಕಳುಹಿಸಿತ್ತು. ತನ್ನ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಬೆಲ್ಜಿಯಂ ಗೆ ತಾಕೀತು ಮಾಡಲಾಗಿತ್ತಾದರೂ ಬೆಲ್ಜಿಯಂ ಆ ಮಾತನ್ನು ಧಿಕ್ಕರಿಸಿತ್ತು. ಹೀಗಾಗಿ ವಿಶ್ವ ಸಂಸ್ಥೆಯ ಶಾಂತಿಪಾಲಕರಿಗೂ ಬೆಲ್ಜಿಯಂ ಪಡೆಗಳು ಮತ್ತು ಅದರ ಬೆಂಬಲದಲ್ಲಿದ್ದ ಇತರ ಬಂಡುಕೋರ ಗುಂಪುಗಳ ನಡುವೆ ಕಾಂಗೋದ ‘ಕಟಾಂಗಾ’ ಪ್ರಾಂತ್ಯದಲ್ಲಿ ಕಾದಾಟ ಏರ್ಪಟ್ಟಿತ್ತು.

ಕಟಾಂಗಾ ಪ್ರಾಂತ್ಯದ ಎಲಿಜಬೇತ್ವಿಲ್ಲೆಯಲ್ಲಿ ಕ್ಯಾ.ಗುರುಬಚನ್ ಸಿಂಗ್ ಸಲಾರಿಯಾ ಇದ್ದ ಭಾರತೀಯ ಶಾಂತಿಪಾಲಕರ ಪಡೆ ನಿಯೋಜಿಸಲ್ಪಟ್ಟಿತ್ತು. ಈ ಪ್ರದೇಶದಲ್ಲಿ‌ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಕೇಂದ್ರವಿತ್ತು. ಆದರೆ ಮಾರ್ಗ ಮಧ್ಯದಲ್ಲಿ ಬಂಡುಕೋರರು ರಸ್ತೆ ತಡೆಗಳನ್ನು‌ ನಿರ್ಮಿಸಿದ್ದರು. ಈ ರಸ್ತೆ ತಡೆಗಳನ್ನು ತೆರವುಗೊಳಿಸುವ ಕಾರ್ಯ ಗುರುಬಚನ್ ಸಿಂಗ್ ತಂಡಕ್ಕೆ ನೀಡಲಾಗಿತ್ತು. ಈ ಪ್ರದೇಶದಲ್ಲಿ ಶಾಂತಿಪಾಲನಾ‌ ಪಡೆಗಳಿಗೆ ಸರಬರಾಜು ಇತ್ಯಾದಿಗಳಿಗೆ ಅಗತ್ಯವಾದ ‘ವಾಯು ನೆಲೆ’ಯೂ ಇತ್ತು. ಹಾಗಾಗಿ ಈ ಪ್ರದೇಶವನ್ನು‌ ಬಂಡುಕೋರರಿಂದ ರಕ್ಷಿಸಬೇಕಿತ್ತು.

ಸಲಾರಿಯಾ ನೇತೃತ್ವದಲ್ಲಿ ಗೂರ್ಖಾ ಸೈನಿಕರು ರಸ್ತೆತಡೆಗಳನ್ನು‌ ತೆಗೆದು ಹಾಕುತ್ತ ಮುನ್ನಡೆದಾಗ ಬಂಡುಕೋರರ ಗುಂಪು ಎದುರಾಯಿತು. ಸಲಾರಿಯಾನ ತಂಡದ ಮೇಲೆ ಬಂಡುಕೋರರು ದಾಳಿ ಶುರುವಿಟ್ಟರು. ಸಲಾರಿಯಾನ ತಂಡದ ಬಳಿ ಶೆಲ್ ದಾಳಿ ನಡೆಸಬಲ್ಲ ಫಿರಂಗಿ, ಕೆಲ ಬಂದೂಕುಗಳು ಮಾತ್ರ ಇದ್ದವು. ಆದರೆ ಎದುರಾಳಿಯ ಬಳಿ ಅತ್ಯಾಧುನಿಕ ಮಷಿನ್‌ಗನ್‌ಗಳು, ಎರಡು ಶಸ್ತ್ರಸಜ್ಜಿತ ವಾಹನಗಳೂ ಇದ್ದವು. ಸುಮಾರು 90 ಸಂಖ್ಯೆಯಲ್ಲಿ‌ ಬಂಡುಕೋರರು ಜಮಾಯಿಸಿದ್ದರು. ಸಲಾರಿಯಾನ‌ ತಂಡದಲ್ಲಿದ್ದದ್ದು ಕೇವಲ 16 ಮಂದಿ ಗೂರ್ಖಾ ಸೈನಿಕರು. ಆದರೆ ಸಲಾರಿಯಾ ದೃತಿಗೆಡಲಿಲ್ಲ. ತಮ್ಮ ರೆಜಿಮೆಂಟಿನ ಯುದ್ಧಘೋಷ ‘ಜೈ ಮಹಾಕಾಳಿ, ಆಯೋ ಗೂರ್ಖಾಲಿ’ ಎನ್ನುತ್ತ ಬಂಡುಕೋರರ ಮೇಲೆ ಪ್ರತಿದಾಳಿ ಆರಂಭಿಸಿದ. ಇಲ್ಲಿ ಆತ ತನ್ನನ್ನೂ‌ ತನ್ನ ತಂಡವನ್ನು ತಪ್ಪಿಸಿಕೊಳ್ಳುವ ತಂತ್ರ ಬಳಸಬಹುದಿತ್ತು. ಏಕೆಂದರೆ ಸಂಖ್ಯೆಯೂ ಕಡಿಮೆಯಿತ್ತು. ಆದರೆ ಹಾಗೆ ಮಾಡಿದರೆ ಶತ್ರುವು ಗೆಲ್ಲುವ ಸಂಭವ ಇತ್ತು. ಪ್ರತಿದಾಳಿ‌‌ ನಡೆಸದಿದ್ದರೆ ಶತ್ರುವಿಗೆ ಮುಂದೆಬರಲು ಒಪ್ಪಿಗೆ ಕೊಟ್ಟಂತಾಗುತ್ತದೆ. ಹಾಗಾಗಿ ಸಲಾರಿಯಾ ‘ಅಟ್ಯಾಕಿಂಗ್’ ತಂತ್ರವನ್ನು ಆಯ್ದುಕೊಂಡ. ಬಂಡುಕೋರ ಗುಂಪುಗಳ ಮೇಲೆ ದಾಳಿ ನಡೆಸಿದ.

ಬಂಡುಕೋರರರು ತಮ್ಮ ಬಳಿಯಿದ್ದ ಶಸ್ತ್ರಾಸ್ತ್ರಗಳಿಂದ ಗುಂಡಿನ ಮಳೆಯನ್ನೇ ಸುರಿಸುತ್ತಿದ್ದರೂ ಸಲಾರಿಯಾ ಸೈತಾನನಂತೆ ಅವರಮೇಲೆ ಎರಗಿದ. 40ಕ್ಕೂ ಹೆಚ್ಚು ಬಂಡುಕೋರರು ಸಲಾರಿಯಾ ದಾಳಿಗೆ ಇಹಲೋಕ ತ್ಯಜಿಸಿದ್ದರು. ‘ಭಯಪಟ್ಟು ಬದುಕುವುದಕ್ಕಿಂತ, ಸಾಯುವುದೇ ಮೇಲು’ ಎಂಬ ಗೂರ್ಖಾ ರೆಜಿಮೆಂಟಿನ ಧ್ಯೇಯವಾಕ್ಯದಂತೆ ಸಲಾರಿಯಾ ಭಯಪಡದೇ ವೀರಾವೇಶದಿಂದ ಹೋರಾಡಿದ. ಆದರೆ ಗುಂಡಿನ ಚಕಮಕಿಯಲ್ಲಿ ಸಲಾರಿಯಾ ಕುತ್ತಿಗೆಗೆ ಎದುರಾಳಿಯ ಬುಲೆಟ್ ತಗುಲಿದ ಪರಿಣಾಮ ಆತ ನೆಲಕ್ಕೆ ಕುಸಿದು ಬಿದ್ದ. ಆದರೆ ಆತ ನಡೆಸಿದ ದಾಳಿ ಹೇಗಿತ್ತು ಎಂದರೆ ಬಂಡುಕೋರರ ಗುಂಪು ಚೆಲ್ಲಾಪಿಲ್ಲಿಯಾಗಿತ್ತು. ಎದುರಾಳಿ ತಂಡದಲ್ಲಿದ್ದ ಬಹುಪಾಲು ಬಂಡುಕೋರರು ಸಾವನ್ನಪ್ಪಿದ್ದರು. ಉಳಿದವರು ದಿಕ್ಕಾಪಾಲಾಗಿ ಹೋಗಿದ್ದರು. ಮುಂಬರುವ ಧೈರ್ಯ ಅವರಾರಿಗೂ ಇರಲಿಲ್ಲ. ನೆಲಕ್ಕುರುಳಿದ ಗುರುಬಚನ್ ಸಿಂಗ್ ಸಲಾರಿಯಾನನ್ನು ರಕ್ಷಿಸುವ ಪ್ರಯತ್ನಗಳು ನಡೆದವಾದರೂ ತೀವ್ರ ರಕ್ತಸ್ರಾವದಿಂದ ಸಲಾರಿಯಾನ ಆತ್ಮ ದೇಹವನ್ನು ತ್ಯಜಿಸಿತ್ತು. ಆದರೆ ಎದುರಾಳಿಗಳ ವಿರುದ್ಧ ಸಲಾರಿಯಾನ ಹೋರಾಟ ಜಯ ಸಾಧಿಸಿತ್ತು. ಆತನ ಅಪ್ರತಿಮ ಹೋರಾಟದ ಫಲವಾಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳ ಮೇಲೆ ಆಗಬಹುದಾಗಿದ್ದ ಭೀಕರ ದಾಳಿಯೊಂದು ತಪ್ಪಿತ್ತು. ವಿಶ್ವಶಾಂತಿಯ ಜ್ವಾಲೆಯುರಿಸಲು ಗುರುಬಚನ್ ಸಿಂಗ್ ಸಲಾರಿಯಾ ಎಂಬ ಯುವಸೈನಿಕನ ರುಧಿರಾರ್ಪಣೆಯಾಗಿತ್ತು.

ಆತನ ಈ ವೀರಾವೇಶದ ಹೋರಾಟವನ್ನು ಸ್ಮರಿಸಿ ಆತನಿಗೆ ಮರಣೋತ್ತರವಾಗಿ ಭಾರತೀಯ ಸೇನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿ ‘ಪರಮ ವೀರ ಚಕ್ರ’ವನ್ನು ನೀಡಿ ಗೌರವಿಸಲಾಗಿದೆ. ವಿಶ್ವಸಂಸ್ಠೆಯಲ್ಲಿನ ಕಾರ್ಯಾಚರಣೆಗಳಿಗೆ ಪರಮವೀರ ಚಕ್ರ ಪಡೆದ ಏಕೈಕ ಯೋಧನೆಂದರೆ ಅದು ಕ್ಯಾಪ್ಟನ್ ಗುರುಬಚನ್ ಸಿಂಗ್ ಸಲಾರಿಯಾ. ಇತ್ತೀಚೆಗೆ ಆತನ ಹೆಸರನ್ನು ಅಂಡಮಾನಿನ ದ್ವೀಪವೊಂದಕ್ಕೆ‌ ನಾಮಕರಣ ಮಾಡುವ ಮುಖೇನ ಆತನ ತ್ಯಾಗ ಸದಾ ಸ್ಮರಣೆಯಲ್ಲಿರುವಂತೆ ಮಾಡಲಾಗಿದೆ. ಆತನಲ್ಲಿದ್ದ ಕ್ಷಾತ್ರತೇಜಕ್ಕೆ, ಎದುರಾಳಿಯೆದುರು ಮಣಿಯದ ಹೋರಾಟಕ್ಕೆ ವಿಶ್ವಶಾಂತಿಯ ಯಜ್ಞದಲ್ಲಿ ಭಾರತದ ಕೀರ್ತಿ ಪತಾಕೆ ಯನ್ನು ಎತ್ತರಕ್ಕೆ ಹಾರುವಂತೆ ಮಾಡಿದ ಶೌರ್ಯಕ್ಕಿದೋ ಸಾಸಿರ ಪ್ರಣಾಮ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!