ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಂಡತಿಯ ಮೇಲಿನ ಪ್ರೀತಿ, ಆಕೆಗಾದ ಅವಮಾನ ಒಬ್ಬ ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ಕೊಂಡೊಯ್ಯಬಲ್ಲದು ಎನ್ನೋದಕ್ಕೆ ಬೆಸ್ಟ್ ಉದಾಹರಣೆ ಅಂದ್ರೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಆದಿವಾಸಿ ರೈತ ಅಜಬ್ ಸಿಂಗ್. ಇವರ ಕಥೆ ಕೇಳಿದ್ರೆ ನಿಮಗೂ ನಿಮ್ಮಾಕೆಯ ಮೇಲೆ ಸ್ವಲ್ಪವಾದರೂ ಪ್ರೀತಿ ಹೆಚ್ಚಾಗಬಹುದು. ಏನಂತೀರಾ?.
ಸಾಗರ್ ಜಿಲ್ಲೆಯ ಇಮಲಿಯಾ ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಇತ್ತು. ಗ್ರಾಮಸ್ಥರು ಖಾಸಗಿ ಬಾವಿಗಳನ್ನೇ ಅವಲಂಬಿಸಬೇಕಾಗಿತ್ತು. ಒಂದು ದಿನ ಅಜಬ್ ಸಿಂಗ್ ಅವರ ಪತ್ನಿ ಸದಾರಾಣಿ ನೀರು ತರಲು ಹೋದಾಗ, ಬಾವಿಯ ಮಾಲೀಕರಿಂದ ಹೀನಾಯವಾದ ಅವಮಾನಕರ ಮಾತುಗಳನ್ನು ಕೇಳಬೇಕಾಯಿತು. ಈ ಘಟನೆ ಅಜಬ್ ಸಿಂಗ್ ಅವರನ್ನು ತೀವ್ರವಾಗಿ ನೋಯಿಸಿಬಿಟ್ಟಿತು. ಇಅದನ್ನು ಸರಿ ಮಾಡೋಡಿಕೆ ಹೊರಟ ಅಜಬ್ ಸಿಂಗ್
ಬಾವಿ ನಿರ್ಮಾಣಕ್ಕೆ ಸರ್ಕಾರದ ವಿವಿಧ ಯೋಜನೆಗಳಡಿ ನೆರವು ಪಡೆಯಲು ಅವರು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಡಳಿತದ ಕಚೇರಿಗಳಿಗೆ ಹಲವು ಬಾರಿ ಅಲೆದರೂ ಯಾವುದೇ ಸಹಾಯ ದೊರೆಯಲಿಲ್ಲ. ಕೊನೆಗೆ ಯಾರನ್ನೂ ಕಾಯದೆ ಸ್ವತಃ ಬಾವಿ ತೋಡಲು ನಿರ್ಧರಿಸಿದರು. ಹಗಲು-ರಾತ್ರಿ ಎನ್ನದೇ ನಿರಂತರ ಏಳು ವರ್ಷ ಶ್ರಮಿಸಿ ಬಾವಿ ನಿರ್ಮಿಸಿದರು.
ಇಂದು ಗ್ರಾಮಕ್ಕೆ ಜೀವನಾಡಿಯಾದ ಬಾವಿ
ಮಳೆಗಾಲದಲ್ಲಿ ಮಣ್ಣು ಕುಸಿದು ಕೆಲಸಕ್ಕೆ ಅಡ್ಡಿಯಾದರೂ ಅಜಬ್ ಸಿಂಗ್ ತಮ್ಮ ಪ್ರಯತ್ನವನ್ನು ಕೈಬಿಡಲಿಲ್ಲ. ಅವರ ಶ್ರಮದ ಫಲವಾಗಿ ನಿರ್ಮಾಣವಾದ ಬಾವಿಯಲ್ಲಿ ಬೇಸಿಗೆಯಲ್ಲೂ ನೀರು ಒಣಗುವುದಿಲ್ಲ. ನೀರಿನ ತೀವ್ರ ಕೊರತೆ ಎದುರಾದಾಗ ಇದೇ ಬಾವಿಯ ನೀರನ್ನು ಗ್ರಾಮಸ್ಥರು ಬಳಸುತ್ತಿದ್ದಾರೆ.
ಇದನ್ನೂ ಓದಿ:
ಬಾವಿ ಸರ್ಕಾರದ ವಶವಾಗುವ ಭಯ
ತಮ್ಮ ಜೀವನಪೂರ್ತಿ ಉಳಿತಾಯ ಖರ್ಚು ಮಾಡಿ ನಿರ್ಮಿಸಿದ ಬಾವಿ ಸರ್ಕಾರದ ಸ್ವತ್ತಾಗಿಬಿಡಬಹುದೆಂಬ ಆತಂಕ ಅಜಬ್ ಸಿಂಗ್ ಅವರಿಗೆ ಇದೆ. ಇದೇ ಕಾರಣಕ್ಕೆ ಬಾವಿಯಲ್ಲಿ ಪಂಚಾಯಿತಿಯಿಂದ ಮೋಟಾರ್ ಅಳವಡಿಸಲು ಅವರು ಒಪ್ಪಿಲ್ಲ. ನೀರು ಬೇಕಾದವರು ಬಾವಿಯಿಂದಲೇ ನೀರು ಎತ್ತಿಕೊಳ್ಳಲಿ ಅನ್ನೋದು ಅವರ ಅಭಿಪ್ರಾಯ.
ಗ್ರಾಮಸ್ಥರಿಂದ ಮೆಚ್ಚುಗೆ
ಗ್ರಾಮದ ಜನರು ಅಜಬ್ ಸಿಂಗ್ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ. ಬೇಸಿಗೆಯಲ್ಲಿ ಇಡೀ ಗ್ರಾಮಕ್ಕೆ ಈ ಬಾವಿಯೇ ನೀರಿನ ಮೂಲವಾಗಿದ್ದು, ಅದನ್ನು ಖಾಸಗಿ ಸ್ವತ್ತಾಗಿಯೇ ಉಳಿಸಬೇಕು ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಸಂಕಷ್ಟದ ಸಮಯದಲ್ಲಿ ಒಬ್ಬ ವ್ಯಕ್ತಿಯ ಸಂಕಲ್ಪ ಇಡೀ ಸಮುದಾಯಕ್ಕೆ ಹೇಗೆ ನೆರವಾಗಬಹುದು ಎಂಬುದಕ್ಕೆ ಅಜಬ್ ಸಿಂಗ್ ಅವರ ಕಥೆ ಸ್ಪೂರ್ತಿದಾಯಕ ಉದಾಹರಣೆ.



