ಹೊಸ ದಿಗಂತ ವರದಿ, ಮಂಡ್ಯ :
ಪತ್ನಿ ಹೆಸರಿನಲ್ಲಿದ್ದ ಕೋಟ್ಯಾಂತರ ರೂ. ವೌಲ್ಯದ ಆಸ್ತಿ ಆಸೆಗಾಗಿ ಮಲಗಿದ್ದ ಸಮಯದಲ್ಲಿ ಹೆಂಡತಿಯನ್ನು ಉಸಿರುಗಟ್ಟಿಸಿ ಪತಿಯೇ ಹತ್ಯೆಗೈದಿರುವ ಘಟನೆ ನಗರದ ವಿ.ವಿ. ನಗರ ಬಡಾವಣೆಯಲ್ಲಿ ನಡೆದಿದೆ.
ಎಸ್. ಶೃತಿ (32) ಎಂಬಾಕೆಯೇ ಕೊಲೆಯಾದವಳು. ಟಿ.ಎನ್. ಸೋಮಶೇಖರ್ (41) ಎಂಬಾತನೇ ಕೊಲೆ ಮಾಡಿದ ಪತಿ.
ಕೊಲೆಯಾದ ಎಸ್. ಶೃತಿ ಹೆಸರಿನಲ್ಲಿ ಮೈಸೂರಿನಲ್ಲಿ ಕೋಟ್ಯಾಂತರ ರೂ. ಬೆಲೆಬಾಳುವ ಆಸ್ತಿ ಇದ್ದು, ಈ ಆಸ್ತಿಯಲ್ಲಿ ಒಂದು ಆಸ್ತಿಯನ್ನು ಮಾರಾಟ ಮಾಡಲು ಆಕೆ ಪ್ರಯತ್ನಿಸುತ್ತಿದ್ದರಿಂದ ಇದನ್ನು ಒಪ್ಪದ ಪತಿ ಸೋಮಶೇಖರ್ ಎಲ್ಲಾ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ನ. 10ರಂದು ರಾತ್ರಿ ಮಲಗಿದ್ದ ಸಮಯದಲ್ಲಿ ದಿಂಬು ಮತ್ತು ಬೆಡ್‌ಶೀಟನ್ನು ಶೃತಿಯ ಮುಖದ ಮೇಲೆ ಬಿಗಿಯಾಗಿ ಹದುಮಿ, ಉಸಿರುಗಟ್ಟಿಸಿ ಸಾಯಿಸಿರುವುದಾಗಿ ಪೊಲೀಸರೆದರು ತಪ್ಪೊಪ್ಪಿಕೊಂಡಿದ್ದಾನೆ.
ಘಟನೆ ವಿವರ :
ಮೈಸೂರಿನ ಹೆಬ್ಬಾಳ ಬಡಾವಣೆಯ ಪಿ.ಷಣ್ಮುಖಸ್ವಾಮಿ ಮತ್ತು ರಾಜೇಶ್ವರಿ ಪುತ್ರಿ ಎಸ್. ಶೃತಿಯನ್ನು ಮಂಡ್ಯದ ವಿ.ವಿ.ನಗರದಲ್ಲಿರುವ ನಾಗರಾಜಪ್ಪ ಅವರ ಮಗ ಟಿ.ಎನ್. ಸೋಮಶೇಖರ್ ಅವರಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಒಂದು ವರ್ಷ ಇವರಿಬ್ಬರ ದಾಂಪತ್ಯ ಜೀವನ ಸುಖಕರವಾಗಿದ್ದು, ನಂತರದಲ್ಲಿ ಪತಿ ಸೋಮಶೇಖರ್ ನಿತ್ಯ ಪತ್ನಿಗೆ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದೆ.
ಆಕೆ ಗರ್ಭಿಣಿಯಾಗಿದ್ದಾಗ ಹಳಸು ಮತ್ತು ತಂಗಳು ಆಹಾರ ನೀಡುತ್ತಿದ್ದರು. ಅನೇಕ ಬಾರಿ ರಾಜೀ ಸಂಧಾನ ಮಾಡಿ ಸಮಾಧಾನಪಡಿಸುತ್ತಿದ್ದರೂ ಸಹ ಆತ ಶೃತಿಗೆ ನೀಡುತ್ತಿದ್ದ ಕಿರುಕುಳವನ್ನು ಮುಂದುವರಿಸಿದ್ದನು ಎಂದು ಮೃತಳ ಚಿಕ್ಕಪ್ಪ ಪಿ. ಕುಮಾರಸ್ವಾಮಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಶೃತಿ ಹೆಸರಿನಲ್ಲಿ ಮೈಸೂರಿನ ವಿಜಯನಗರ 1ನೇ ಹಂತದಲ್ಲಿ ಮೂರಂತಸ್ತಿನ ಮನೆಯನ್ನು ಕಟ್ಟಿಸಿಕೊಡಲಾಗಿತ್ತು. ಆನಂತರದಲ್ಲಿ ತಂದೆ ಷಣ್ಮುಖಸ್ವಾಮಿ, ತಾಯಿ ರಾಜೇಶ್ವರಿಯವರು ಕೇವಲ ಎರಡು ವರ್ಷದ ಅಂತರದಲ್ಲಿ ವಿಧಿವಶರಾದರು. 6 ತಿಂಗಳ ತರುವಾಯ ತಂಗಿ ಸುಶ್ಮಿತಾ ಅಪಘಾತದಲ್ಲಿ ಮೃತಪಟ್ಟಿದ್ದರು. ಹೀಗಾಗಿ ಎಲ್ಲಾ ಆಸ್ತಿಗಳನ್ನೂ ಶೃತಿ ಹೆಸರಿಗೆ ವರ್ಗಾಯಿಸಿಕೊಡಲಾಗಿತ್ತು.
ಶೃತಿಯ ಹೆಸರಿನಲ್ಲಿರುವ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಡುವಂತೆ ಸೋಮಶೇಖರ್ ಪೀಡಿಸುತ್ತಿದ್ದನೆನ್ನಲಾಗಿದೆ. ಇದಕ್ಕೆ ಶೃತಿ ಒಪ್ಪಿರಲಿಲ್ಲ ಎಂದು ತಿಳಿಸಿದ್ದಾರೆ.
ಶೃತಿ ತನ್ನ ಹೆಸರಿನಲ್ಲಿದ್ದ ಎಲ್ಲಾ ಚರ ಮತ್ತು ಸ್ಥಿರಾಸ್ಥಿಗಳನ್ನು ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಲು ಬಯಸಿದ್ದಳು. ಆದರೆ ಇದನ್ನು ಬಲವಾಗಿ ಪತಿ ಟಿ.ಎನ್. ಸೋಮಶೇಖರ್ ವಿರೋಧಿಸಿ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಡ ಹೇರುತ್ತಿದ್ದನೆಂದು ದೂರಿನಲ್ಲಿ ವಿವರಿಸಿದ್ದಾರೆ.
ಶೃತಿಯ ಹೆಸರಿನಲ್ಲಿದ್ದ ಕೋಟ್ಯಾಂತರ ರೂ. ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ಸೋಮಶೇಖರ್ ಆಕೆಯನ್ನು ಕೊಲೆ ಮಾಡಿ ಅದನ್ನು ಸಹಜ ಸಾವೆಂದು ಬಿಂಬಿಸಲು ಆರಂಭದಲ್ಲಿ ಪ್ರಯತ್ನಿಸಿದ್ದನು. ಆದರೆ, ಮೃತೆಯ ಸಾವಿನ ಬಗ್ಗೆ ಸಂಬಂಧಿ ಪಿ. ಕುಮಾರಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿ ಪತಿ ಟಿ.ಎನ್. ಸೋಮಶೇಖರ್, ಅತ್ತೆ ನೀಲಾಂಬಿಕೆ, ಅತ್ತಿಗೆ ಹೇಮಲತಾ ಅವರ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಶವ ಪರೀಕ್ಷೆ ನಡೆಸಿ ಆರೋಪಿ ಸೋಮಶೇಖರನನ್ನು ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ವೇಳೆ ಶೃತಿಯನ್ನು ತಾನೇ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರಿಂದ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.