ಹೊಸದಿಗಂತ ವರದಿ, ಹಾಸನ:
ನಗರದ ಮಹಿಳಾ ಪೊಲೀಸ್ ಠಾಣೆಗೆಯಲ್ಲಿ ಪೊಲೀಸರೆದುರೇ ತನ್ನ ಪತ್ನಿಯ ಪತ್ನಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಲು ಮುಂದಾಗಿದ್ದ ಕಿರಾತಕನನು ಪೊಲೀಸರು ಬಂಧಿಸಿದ್ದಾರೆ.
ಗಾಯಾಳು ಶಿಲ್ಪಾ (೨೩) ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ವಿರುದ್ಧವೇ ಮೃಗೀಯ ವರ್ತನೆ ತೋರಿ ತನ್ನ ಪತ್ನಿಗೆ ಇರಿದ ಆರೋಪಿ ಹರೀಶ್(೩೭) ಬಂಧಿಯಾಗಿದ್ದಾನೆ.
ಶಿಲ್ಪಾ ಮತ್ತು ಹರೀಶ್ ಆರು ವರ್ಷಗಳ ಹಿಂದೆ ಮದುವೆ ಯಾಗಿದ್ದರು. ನಗರದ ಹೊರ ವಲಯದ ಬಿಟ್ಟಗೋಡನಹಳ್ಳಿಯಲ್ಲಿ ಇಬ್ಬರೂ ವಾಸವಾಗಿದ್ದರು. ಆರಂಭದಲ್ಲಿ ಅನ್ಯೂನ್ಯವಾಗಿದ್ದ ದಂಪತಿಗೆ ೪ ವರ್ಷದ ಮುದ್ದಾದ ಮಗು ಇದೆ. ಹೀಗಿದ್ದರೂ ಇಬ್ಬರ ನಡುವೆ ಅನುಮಾನದ ಪೆಂಡಭೂತ ಹೊಕ್ಕಿದ್ದರಿಂದ ಸಂಸಾದಲ್ಲಿ ವಿರಸ ಆರಂಭವಾಗಿತ್ತು.
ತನ್ನ ಪತಿ ಪರಸ್ತ್ರೀ ಸಹವಾಸ ಮಾಡಿದ್ದಾನೆ ಎಂಬುದು ಗೊತ್ತಾಗಿ ಅದನ್ನು ಪ್ರಶ್ನಿಸಿದ ಪತ್ನಿಗೆ ದೈಹಿಕ ಹಲ್ಲೆ ನಡೆಸಿ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದನು ಎನ್ನುವುದು ಶಿಲ್ಪಾ ಆರೋಪ. ಗಂಡನ ಈ ವರ್ತನೆ ಸಹಿಸಲಾಗದೇ ಆಕೆ ಮಹಿಳಾ ಠಾಣೆ ಪೊಲಿಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಇಬ್ಬರನ್ನೂ ಮಾತುಕತೆಗೆಂದು ಪೊಲೀಸರು ಭಾನುವಾರ ಮಧ್ಯಾಹ್ನ ಕರೆಸಿದ್ದ ವೇಳೆ ಪಿಎಸ್‌ಐ ಬಿ.ಎಸ್.ಉಮಾ ಅವರು ಇಬ್ಬರನ್ನೂ ಸಮಾಧಾನಪಡಿಸಿ ಬುದ್ಧಿವಾದ ಹೇಳಿ ಒಟ್ಟಿಗೆ ಬಾಳುವಂತೆ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದರು.
ಇದಕ್ಕೆ ಶಿಲ್ಪಾ ಒಪ್ಪದೇ, ತನ್ನ ಪತಿಯ ಕಿರುಕುಳ ನನ್ನಿಂದ ಮತ್ತೂ ಸಹಿಸಲು ಆಗುವುದಿಲ್ಲ. ಆತ ನನ್ನನ್ನು ಬದುಕಲು ಬಿಡುವುದಿಲ್ಲ. ನನ್ನನ್ನು ಕೊಲೆ ಮಾಡಿಬಿಡುತ್ತಾನೆ ಎಂದು ಗೋಳಿಟ್ಟರು.
ಹೀಗಾಗಿ ಶಿಲ್ಪಾಳನ್ನು ನಗರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇದರಿಂದ ಕುಪಿತನಾದ ಹರೀಶ, ನನ್ನ ಮೇಲೆಯೇ ದೂರು ಕೊಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿನ್ನನ್ನು ಕೊಲೆ ಮಾಡದೇ ಬಿರುವುದಿಲ್ಲ ಎಂದು ಮೊದಲೇ ಹೊಂದಿಸಿಕೊoಡು ತಂದಿದ್ದ ಚಾಕುವಿನಿಂದ ಏಕಾ ಏಕಿ ಆಕೆಯ ಕುತ್ತಿಗೆಯನ್ನು ಇರಿದನು.
ಕೂಡಲೇ ಠಾಣೆಯಲ್ಲಿದ್ದ ಸಿಬ್ಬಂದಿ ಹಾಗೂ ಶಿಲ್ಪಾ ಕಡೆಯವರು ಹರೀಶ್‌ನನ್ನು ಹಿಡಿದು ಅನಾಹುತ ತಪ್ಪಿಸಿದರು. ಕೊಲೆಯತ್ನ ವಿಫಲಗೊಳಿಸಿ ಹರೀಶ್ ಕೈಯಲ್ಲಿದ್ದ ಚಾಕು ಕಸಿದುಕೊಂಡು ವಶಕ್ಕೆ ಪಡೆದರು. ಗಂಭೀರವಾಗಿ ಗಾಯಗೊಂಡಿರುವ ಶಿಲ್ಪಾ ಚಿಕಿತ್ಸೆ ಪಡೆಯುತ್ತಿದ್ದಾಳೆ.