ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀವಭಯದಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಕಳುಹಿಸಿದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬೆಳಕಿಗೆ ಬಂದಿದೆ.
ದೌಲತ್‌ಪುರ ಗ್ರಾಮದ ದಿನಗೂಲಿ ಕಾರ್ಮಿಕ ರಾಜಕುಮಾರ್ ಏಳು ವರ್ಷಗಳಿಂದ ವೈವಾಹಿಕ ಜೀವನ ನಡೆಸುತ್ತಿದ್ದು, ದಂಪತಿಗೆ ಆರು ತಿಂಗಳ ಮಗುವಿದೆ. ಆದರೆ, ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾಳೆ. ಆಕೆಯ ಮೊಬೈಲ್ ಪರಿಶೀಲಿಸಿದ ವೇಳೆ ಪ್ರಿಯಕರನ ಜೊತೆಗಿನ ಆಕ್ಷೇಪಾರ್ಹ ಚಿತ್ರಗಳು ಹಾಗೂ “ಸಿಮೆಂಟ್ ಮತ್ತು ಬ್ಲೂ ಡ್ರಮ್” ಎಂಬ ಉಲ್ಲೇಖ ಕಂಡು ರಾಜಕುಮಾರ್ ಆತಂಕಕ್ಕೀಡಾದರು.
ಕಳೆದ ವರ್ಷ ಮೀರತ್‌ನಲ್ಲಿ ನಡೆದ ಹತ್ಯೆ ಪ್ರಕರಣದ ಮಾದರಿಯನ್ನು ಉಲ್ಲೇಖಿಸಿ, “ಅಡ್ಡ ಬಂದರೆ ನಿನ್ನನ್ನೂ ಅದೇ ರೀತಿ ಮುಗಿಸುತ್ತೇನೆ” ಎಂದು ಪತ್ನಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಇದರಿಂದ ಭಯಗೊಂಡ ರಾಜಕುಮಾರ್ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಇದನ್ನೂ ಓದಿ:
ಮಹಿಳಾ ಮಧ್ಯಸ್ಥಿಕೆ ಕೇಂದ್ರದಲ್ಲಿ ನಡೆದ ಕೌನ್ಸೆಲಿಂಗ್ ವೇಳೆ, ಪತ್ನಿ ಪ್ರಿಯಕರನ ಜೊತೆಗೇ ಇರಬೇಕೆಂದು ಹಠ ಹಿಡಿದಿದ್ದಾಳೆ. ಕೊನೆಗೆ ತನ್ನ ಸುರಕ್ಷತೆಯ ದೃಷ್ಟಿಯಿಂದ ರಾಜಕುಮಾರ್ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಕಳುಹಿಸಲು ಒಪ್ಪಿಕೊಂಡಿದ್ದಾರೆ.
ಕುಟುಂಬ ಜೀವನದಲ್ಲಿ ನಿರ್ಲಕ್ಷ್ಯವೂ ಇತ್ತು ಎಂದು ಹೇಳಿಕೊಂಡಿರುವ ಅವರು, ಪತ್ನಿಯ ವರ್ತನೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.



