ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗುರಿ ಆಟೋರಿಕ್ಷಾ ಸ್ಫೋಟ ಪ್ರಕರಣ ಸಂಬಂಧಿಸಿ ಆರೋಪಿಯ ಗುರುತು ಸ್ಪಷ್ಟವಾಗಿಲ್ಲ. ಗುರುತು ಸ್ಪಷ್ಟವಾದ ಬಳಿಕವಷ್ಟೇ ಸ್ಪಷ್ಟ ಮಾಹಿತಿ ನೀಡುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನ ನಾಗುರಿ ಪರಿಸರದಲ್ಲಿನ ಆಟೋ ರಿಕ್ಷಾ ಸ್ಫೋಟ ಪ್ರಕರಣದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
ಆರೋಪಿ ಸದ್ಯ ಆಸ್ಪತ್ರೆಯಲ್ಲಿದ್ದು, ಕೈ ಸನ್ನೆಯ ಮೂಲಕವಷ್ಟೇ ಉತ್ತರ ನೀಡುತ್ತಿದ್ದಾನೆ. ಆತನ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಬಂದ ಬಳಿಕ ಇನ್ನಷ್ಟು ವಿಚಾರ ತಿಳಿಯಲಿದೆ ಎಂದರು.
ಘಟನೆಯಿಂದ ಆರೋಪಿಯ ಮುಖ ಸುಟ್ಟ ಗಾಯಗಳಿಂದ ಊದಿಕೊಂಡಿದೆ. ಆತ ಮಾತನಾಡುವ ಸ್ಥಿತಿಯಲ್ಲಿಲ್ಲ. ಗುರುತು ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಬಳಿಕ ವಿವರ ನೀಡುವುದಾಗಿ ತಿಳಿಸಿದರು.
ಇದುವರೆಗಿನ ವಿಚಾರಣೆಯಿಂದ ಸಾಕಷ್ಟು ಮಾಹಿತಿ ಸಿಕ್ಕಿದೆ. ಆತನ ಹೇಳಿಕೆ ಆಧಾರದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿ ಮಂಗಳೂರಿನಲ್ಲಿ ಎಲ್ಲೆಲ್ಲ ಹೋಗಿದ್ದಾನೆ, ಯಾರ ಜೊತೆ ಸಂಪರ್ಕದಲ್ಲಿದ್ದಾನೆ ಎನ್ನುವ ಕುರಿತಂತೆ ತನಿಖೆ ನಡೆಸಲಾಗುವುದು ಎಂದು ಅಲೋಕ್ ಕುಮಾರ್ ತಿಳಿಸಿದರು.