ಪ್ರಧಾನಿ ಮೋದಿಯವರ ದೂರದೃಷ್ಟಿಯ ಪರಿಣಾಮ ಭಾರತದಲ್ಲಿ ಜನಪರ ವಿದೇಶಾಂಗ ನೀತಿ ಅನುಷ್ಠಾನ: ಜೈಶಂಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಪರಿಣಾಮವಾಗಿ ಕಳೆದ 8 ವರ್ಷಗಳಲ್ಲಿ ಜನಪರ ವಿದೇಶಾಂಗ ನೀತಿಯನ್ನು ಭಾರತ ಅನುಷ್ಠಾನಕ್ಕೆ ತಂದಿದೆ ಎಂದು ಎಸ್. ಜೈಶಂಕರ್ ಅವರು ತಿಳಿಸಿದರು.
ಬಿಜೆಪಿ ವತಿಯಿಂದ ಇಂದು ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು, “2014ರ ಬಳಿಕ ಭಾರತದ ವಿದೇಶಾಂಗ ನೀತಿ” ಕುರಿತಂತೆ ಅವರು ಮಾತನಾಡಿದರು.
ಹಿಂದೆ ಹಲವು ತಿಂಗಳ ಬಳಿಕ ಪಾಸ್‍ಪೋರ್ಟ್ ಸಿಗುತ್ತಿತ್ತು. ಈಗ ಬೇಗನೆ ಪಾಸ್‍ಪೋರ್ಟ್ ಸಿಗುವಂತಾಗಿದೆ. ಜನರ ನಿಟ್ಟಿನಲ್ಲಿ ನಿಂತು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಧಾನಿ ಇರುವ ಕಾರಣ ಇದೆಲ್ಲ ಸಾಧ್ಯವಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಹೊರದೇಶಗಳಿಂದ 70 ಲಕ್ಷ ಜನರನ್ನು ಕರೆತರಲಾಯಿತು. ಮಾಸ್ಕ್, ವೆಂಟಿಲೇಟರ್ ಮತ್ತು ಆಮ್ಲಜನಕ ಕೊರತೆಯ ಸಮಸ್ಯೆಯ ಪರಿಹಾರಕ್ಕೆ ಶ್ರಮಿಸಲಾಯಿತು. ಉಕ್ರೇನ್ ಯುದ್ಧಕಾಲದಲ್ಲಿ ಅಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವುದರಲ್ಲೂ ಜನರ ಬಗೆಗಿನ ಕಳಕಳಿ ಇರುವ ನೀತಿಯನ್ನು ನಾವು ಕಾಣಬಹುದು ಎಂದು ವಿಶ್ಲೇಷಿಸಿದರು.
ನೇಪಾಳದಲ್ಲಿ ಭೂಕಂಪನ, ಯೆಮನ್‍ನಲ್ಲಿ ಯುದ್ಧ, ಮೊಜಾಂಬಿಕ್‍ನಲ್ಲಿ ನೆರೆ ಸೇರಿದಂತೆ ಹತ್ತಾರು ಸಮಸ್ಯೆಗಳಿಗೆ ಸ್ಪಂದಿಸುವ ಗುಣ ನಮ್ಮದಾಗಿತ್ತು ಎಂದ ಅವರು, ಯೋಗವನ್ನು ವಿಶ್ವದಾದ್ಯಂತ ಹಬ್ಬಿಸುವಲ್ಲಿ ಪ್ರಧಾನಿ ಮೋದಿಯವರ ಚಿಂತನೆ ಮಹತ್ವದ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ಸೂಚಿಸಿದರು. ಭಾರತದಿಂದ ವಿದೇಶಕ್ಕೆ ಪ್ರವಾಸ ಮತ್ತು ಹೊರದೇಶಗಳಿಂದ ಭಾರತಕ್ಕೆ ಬರಲು ಇದ್ದ ನೀತಿಯನ್ನು ಸರಳಗೊಳಿಸಿದ್ದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಲಭಿಸಿದೆ ಎಂದು ವಿವರಿಸಿದರು.
ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಸಂಸದ ಪಿ.ಸಿ.ಮೋಹನ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!