ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶದಾದ್ಯಂತ ಭರ್ಜರಿ ಚರ್ಚೆಯಲ್ಲಿರುವ ‘ದಿ ಕಾಶ್ಮೀರ್ ಫೈಲ್ಸ್’ನ ಉಚಿತ ಡೌನ್‌ಲೋಡ್ ಲಿಂಕ್‌ಗಳು WhatsAppಗಳಲ್ಲಿ ಯರ್ರಾಬಿರ್ರಿ ಹರಿದಾಡುತ್ತಿದ್ದು, ಇದರ ಜೊತೆಯಲ್ಲಿ ಈ ಲಿಂಕ್ ಬಳಸಿ ಉಚಿತವಾಗಿ ವೀಕ್ಷಿಸಿ ಎಂಬ ಒತ್ತಾಯಗಳು ಕೂಡಾ ಬರುತ್ತಿವೆ. ಹೇಗೂ ಟಿಕೆಟ್ ಸಿಗುತ್ತಿಲ್ಲ, ಹೀಗಾದರೂ ನೋಡುವಾ… ಎಂದು ಲಿಂಕ್ ಒತ್ತಿದಿರೋ ಜೋಕೆ!
ಅಕೌಂಟ್‌ಗಳು, ಪಾಸ್‌ವರ್ಡ್ ಗೋತಾ!
WhatsAppನಲ್ಲಿ ಬರುವ ಈ ಲಿಂಕ್ ಜೊತೆಯಲ್ಲಿ ಮಾಲ್‌ವೇರ್ ಇರುವ ಸಾಧ್ಯತೆ ಹೆಚ್ಚಾಗಿದ್ದು, ಕ್ಲಿಕ್ ಮಾಡಿದರೆ ಫೋನ್ ಹ್ಯಾಕ್ ಆಗುವ ಸಾಧ್ಯತೆ ಇದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಿದ ಎಲ್ಲಾ ಬ್ಯಾಂಕ್ ಅಕೌಂಟ್‌ಗಳು, ಪಾಸ್‌ವರ್ಡ್ ಮತ್ತಿತರ ಗೌಪ್ಯ ಅಂಶಗಳು ಹ್ಯಾಕರ್‌ಗಳ ಪಾಲಾಗುವ ಸಾಧ್ಯತೆ ಇದೆ ಎಂದು ನೊಯ್ಡಾದ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ರಣ್‌ವಿಜಯ್ ಸಿಂಗ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿದೆ.
ಇದುವರೆಗೆ ಇಂತಹಾ ಯಾವುದೇ ನಿರ್ದಿಷ್ಟ ಪ್ರಕರಣ ದಾಖಲಾಗಿಲ್ಲ. ಆದರೂ ಈ ಮೂಲಕ ಫೋನ್‌ಗೆ ಕನ್ನ ಹಾಕಲು, ಹಣ ದೋಚಲು ಹ್ಯಾಕರ್‌ಗಳು ಸಂಚು ರೂಪಿಸುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಚಿತ್ರ ಈಗಾಗಲೇ ಸಖತ್ ಸದ್ದು ಮಾಡಿದ್ದು, 90ರ ದಶಕದಲ್ಲಿ ನಡೆದ ಕಾಶ್ಮೀರಿ ಹಿಂದುಗಳ ನರಮೇಧದ ಘಟನಾವಳಿಗಳನ್ನು ನಿರ್ದೇಕ ವಿವೇಕ್ ಅಗ್ನಿಹೋತ್ರಿ ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದೆಡೆ ಈ ಸಿನೆಮಾ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದ್ದರೆ, ಇನ್ನೊಂದೆಡೆ ವಾಟ್ಸ್‌ಆಪ್‌ನಲ್ಲಿ ಸಿನೆಮಾದ ಉಚಿತ ಡೌನ್‌ಲೋಡ್ ಲಿಂಕ್ ಹರಿದಾಡುತ್ತಿದೆ.