ತಮ್ಮ ದೂರದೃಷ್ಟಿತ್ವ, ಇಚ್ಛಾಶಕ್ತಿ ಬಲದಿಂದ ಬೆಂಗಳೂರನ್ನು ಅದ್ಭುತ ನಗರವನ್ನಾಗಿ ರೂಪಿಸಿದ ಕೆಂಪೇಗೌಡರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೆಂಪೇಗೌಡರು ತಮ್ಮ ದೂರದೃಷ್ಟಿತ್ವ ಹಾಗೂ ಇಚ್ಛಾಶಕ್ತಿ ಹಾಗೂ ಒಳನೋಟಗಳಿಂದ ಬೆಂಗಳೂರನ್ನು ಅದ್ಭುತ ನಗರವನ್ನಾಗಿ ರೂಪಿಸಿದರು. ಆಡಳಿತ, ಧರ್ಮ ರಕ್ಷಣೆ, ಪರಿಸರ ಸಂರಕ್ಷಣೆ, ಕುಡಿಯುವ ನೀರಿಗೆ ಆದ್ಯತೆ, ನೀರಾವರಿ ಮತ್ತು ಇತರೆ ಕ್ಷೇತ್ರಗಳಲ್ಲಿ ಅವರ ಅಪ್ರತಿಮ ಕೊಡುಗೆಗಳು ಶತಮಾನಗಳೇ ಕಳೆದರೂ ಅವರನ್ನು ಆದರಣೀಯ ವ್ಯಕ್ತಿಯನ್ನಾಗಿ ಮಾಡಿವೆ.
ಬೆಂಗಳೂರನ್ನು ಪೂರ್ಣಪ್ರಮಾಣದ ನಗರವನ್ನಾಗಿ ಅಭಿವೃದ್ಧಿಪಡಿಸುವಲ್ಲಿ ಕೆಂಪೇಗೌಡರ ಅಪಾರ ಪರಿಶ್ರಮವಿದೆ. ಈ ನಗರದೊಂದಿಗೆ ಅವರ ಹೆಸರು ಸಹ ಗುರುತಿಸಿಕೊಂಡಿದೆ. ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಶಾಶ್ವತ ಕುಡಿಯುವ ನೀರಿನ ಪೂರೈಕೆಗಾಗಿ ನಾಡಪ್ರಭುಗಳು ಕೈಗೊಂಡ ಪ್ರಯತ್ನಗಳು ಅವರು ನಿರ್ಮಿಸಿದ ಕೆರೆಗಳ ಸಂಖ್ಯೆಯಲ್ಲಿ ಪ್ರತಿಫಲಿಸುತ್ತದೆ. ಅವರ ದೂರದೃಷ್ಟಿಯು ಕರ್ನಾಟಕದ ಪ್ರತಿಯೊಬ್ಬ ಆಡಳಿತಗಾರರಿಗೆ ಹಾಕಿಕೊಟ್ಟ ಮೆಲ್ಪಂಕ್ತಿಯಾಗಿದೆ.
ಬೆಂಗಳೂರಿನ ಸರ್ವತೋಮುಖ ಆರ್ಥಿಕ ಪ್ರಗತಿಯನ್ನು ದಾಖಲಿಸುವ ನಿಟ್ಟಿನಲ್ಲಿ ಅಕ್ಕಿಪೇಟೆ, ತರಗುಪೇಟೆ, ಬಳೆಪೇಟೆ, ಚಿಕ್ಕಪೇಟೆ, ಅರಳೆಪೇಟೆ ಸೇರಿದಂತೆ ನಿರ್ಧಿಷ್ಟ ಉದ್ಯೋಗ- ಉತ್ಪಾದನೆಗಾಗಿ ಪೇಟೆಗಳ ನಿರ್ಮಾಣದ ಜೊತೆಗೆ ವ್ಯಾಪಕವಾದ ವಸಾಹತುಗಳನ್ನು ಅಭಿವೃದ್ಧಿಪಡಿಸಿದರು. ಅವರು ಬೆಂಗಳೂರಿನ ಕೋಟೆಯನ್ನು ನಿರ್ಮಿಸುವುದು ಮಾತ್ರವಲ್ಲದೆ ಪಾಳೆಯಗಾರನ ಪಾತ್ರವನ್ನು ನಿರ್ವಹಿಸಲು ಮತ್ತು ಪ್ರದೇಶಕ್ಕೆ ಸ್ಥಿರವಾದ ಆಡಳಿತವನ್ನು ಒದಗಿಸಲು ನಗರದ ಸುತ್ತಲೂ ಹಲವಾರು ಕೋಟೆಗಳನ್ನು ಅಭಿವೃದ್ಧಿಪಡಿಸಿದರು.
ಅವರು ನಿರ್ಮಿಸಿದ ಹಾಗೂ ಅಭಿವೃದ್ಧಿಪಡಿಸಿದ ಕೋಟೆಗಳಲ್ಲಿ ಪ್ರಮುಖವಾದವುಗಳಾದ ಮಾಗಡಿ ಕೋಟೆ, ಸಾವನದುರ್ಗ ಕೋಟೆ, ನೆಲಪಟ್ಟಣ, ಹುತ್ರಿದುರ್ಗದ ಏಳು ಗೋಡೆಯ ಕೋಟೆ, ಹುಲಿಯೂರುದುರ್ಗ ಕೋಟೆ, ಕುದೂರಿನ ಭೈರವನದುರ್ಗ ಕೋಟೆ, ಶಿವಗಂಗಾ ಕೋಟೆ ಮತ್ತು ರಾಮದುರ್ಗ ಕೋಟೆಗಳು ಇಂದಿಗೂ ಪ್ರಖ್ಯಾತಿ ಗಳಿಸಿಕೊಂಡಿವೆ.
ಬೆಂಗಳೂರಿನ ಹವಾಮಾನಕ್ಕೆ ಸೂಕ್ತವಾದ ಮರಗಳನ್ನು ನಗರದಾದ್ಯಂತ ಅವರು ನೆಡಿಸಿದರು. ವಾಸ್ತವವಾಗಿ, ‘ಲಾಲ್ಬಾಗ್’ ಹಿಂದೆ ಇದ್ದವರು ಸಹ ಕೆಂಪೇಗೌಡರೇ ಆಗಿದ್ದಾರೆ. ಜೊತೆಗೆ ಹಲಸೂರಿನ ಪ್ರಸಿದ್ಧ ಸೋಮೇಶ್ವರ ದೇವಾಲಯ, ಇತಿಹಾಸ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದ ಜೀರ್ಣೋದ್ಧಾರವನ್ನು ನಡೆಸುವ ಮೂಲಕ ಅವರು ಸನಾತನ ಧರ್ಮವನ್ನು ಎತ್ತಿ ಹಿಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!