- ಮೇಘನಾ ಶೆಟ್ಟಿ, ಶಿವಮೊಗ್ಗ
ಅಪ್ಪಾ ಇವತ್ ಸ್ಕೂಲ್ ಅಲ್ ಏನಾಯ್ತು ಗೊತ್ತಾ? ಅಮ್ಮಾ ಇವತ್ ಸ್ಕೂಲ್ ಅಲ್ ಏನಾಯ್ತು ಗೊತ್ತಾ? ಅಪ್ಪಾ.. ಅಮ್ಮಾ..
ಹಾಲ್‌ನಲ್ಲಿದ್ದ ಅಪ್ಪ ಫೋನ್ ನೋಡುತ್ತಲೇ ‘ಹು ಹೇಳು’ ಅಂದ್ರೆ, ರೂಮ್‌ನಲ್ಲಿ ಸೀರಿಯಲ್ ನೋಡ್ತಾ ಕೂತಿದ್ದ ಅಮ್ಮನಿಗೆ ಮಗನ ಕೂಗು ಕೇಳಿಸ್ಲೂ ಇಲ್ಲ!
ಇದೇ ಹೆಚ್ಚು ಮನೆಗಳ ಕಥೆ, ಎಲ್ಲೋ ಒಬ್ಬಿಬ್ಬರು ಮಕ್ಕಳಿಗೆ ಕೊಡಬೇಕಾದಷ್ಟು ಅಟೆಂಶನ್ ಕೊಡಬಹುದು, ಆದರೆ ಹೆಚ್ಚಿನ ಪೋಷಕರು ತಮ್ಮದೇ ಮೊಬೈಲ್‌ನಲ್ಲಿ ಮುಳುಗಿ ಹೋಗಿರ‍್ತಾರೆ. ಮಕ್ಕಳ ಮೊಬೈಲ್ ಅಡಿಕ್ಷನ್ ಬಿಡಿಸೋ ಬಗ್ಗೆ ಮಾತನಾಡುವ ಮುನ್ನ, ಮಕ್ಕಳಿಗೆ ಮೊಬೈಲ್ ಟೈಮ್ ಲಿಮಿಟ್ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಬಗ್ಗೆ ಯೋಚನೆ ಮಾಡಿ. ದಿನಕ್ಕೆ ನೀವೆಷ್ಟು ಗಂಟೆ ಮೊಬೈಲ್ ಬಳಕೆ ಮಾಡ್ತೀರಿ? ನಿಮಗೆಷ್ಟು ಲಿಮಿಟೇಶನ್ ಇದೆ?
ನೀವು ಮಾಡೋದನ್ನೇ ಮಕ್ಕಳೂ ಮಾಡ್ತಾರೆ, ನೀವು ಹೇಳಿಕೊಡದನ್ನೂ ಕಲಿತುಕೊಳ್ತಾರೆ ಅನ್ನೋ ವಿಷಯ ಗೊತ್ತಿರೋದೆ, ನೀವು ಅಷ್ಟೊಂದು ಪ್ರೀತಿಸುವ, ಸದಾ ನಿಮ್ಮ ಬಡ್ಡೆಯಲ್ಲೇ ಇರುವ ಫೋನ್‌ಗೆ ಕೊಡುವಷ್ಟು ಸಮಯ ಮಕ್ಕಳಿಗೆ ಕೊಡ್ತಿದ್ದೀರಾ? ನೀವು ಹೆಚ್ಚು ಫೋನ್ ಬಳಸಿ ಮಕ್ಕಳಿಗೆ ಮಾತ್ರ ಫೋನ್ ಮುಟ್ಟಬೇಡ ಅಂದರೆ ಅವರಿಗೆ ಮೊಬೈಲ್ ಬಗ್ಗೆ ಆಸಕ್ತಿ ಹೆಚ್ಚಾಗುತ್ತಲೇ ಹೋಗುತ್ತದೆ.
ಆಫೀಸ್‌ನಿಂದ ಮನೆಗೆ ಬಂದ ಮೇಲೆ ಮಕ್ಕಳ ಬಗ್ಗೆ ಗಮನ ನೀಡಿ, ‘ಅಪ್ಪಾ ಅಮ್ಮಾ’ ಎಂದು ಮಕ್ಕಳು ಕೂಗಿದಾಗ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿ ‘ಏನು’ ಎಂದು ಕೇಳಿ, ನೀವು ಅತಿಯಾಗಿ ಬ್ಯುಸಿಯಾಗಿದ್ದೀರಿ ಎಂದುಕೊಳ್ಳಿ, ಮಗು ‘ಅಮ್ಮಾ’ ಎಂದಾಗ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ‘ಒಂದೆರಡು ನಿಮಿಷ ಕೆಲಸ ಮಾಡ್ತಿದ್ದೇನೆ’ ಎಂದು ಹೇಳಬಹುದಲ್ವಾ?
ಸಮಾಜದಲ್ಲಿ ಯಾವ ವ್ಯಕ್ತಿಗಳನ್ನು ಕೆಟ್ಟವರು ಎಂದು ಲೇಬಲ್ ಮಾಡಲಾಗಿದ್ಯೋ ಹೆಚ್ಚಿನ ಪಕ್ಷ ಆ ಎಲ್ಲಾ ವ್ಯಕ್ತಿಗಳ ಬಾಲ್ಯವೂ ಕೆಟ್ಟದಾಗಿಯೇ ಇರುತ್ತದೆ. ಕಣ್ಮುಚ್ಚಿ ಕಣ್ಣು ತೆರೆಯುವುದರೊಳಗೆ ಮಕ್ಕಳು ದೊಡ್ಡವರಾಗಿ ಬಿಡ್ತಾರೆ, ಅವರಿಗೆ ನಿಮ್ಮ ಅವಶ್ಯಕತೆ ಇಲ್ಲದಂತಾಗುತ್ತದೆ.
ತಂದೆತಾಯಿಯ ಮೊಬೈಲ್ ಗೀಳಿನಿಂದ ಮಕ್ಕಳಿಗೇನಾಗುತ್ತದೆ ಗೊತ್ತಾ?
- ಖಿನ್ನತೆ
- ಆಂಕ್ಸೈಟಿ
- ಒಂಟಿತನ
- ಕೋಪ
- ಓದಿನಲ್ಲಿ ಹಿಂದುಳಿಯುವುದು
- ಯಾವುದೇ ವಿಷಯದಲ್ಲಿಯೂ ಆಸಕ್ತಿ ಇಲ್ಲದಿರುವುದು
- ಬೊಜ್ಜು
- ನಿದ್ದೆ ಬಾರದೇ ಇರುವುದು
ಏನು ಮಾಡಬಹುದು? - ಮನೆಗೆ ಬಂದ ನಂತರ ಕೆಲಸದ ಜೀವನದಿಂದ ಬ್ರೇಕ್ ಪಡೆಯಿರಿ, ತೀರಾ ಮುಖ್ಯವಾದ ಕೆಲಸ ಇದ್ದರೆ ರೂಮ್‌ಗೆ ಹೋಗಿ ಮಾಡಿ ಬನ್ನಿ
- ಒಟ್ಟಿಗೇ ಕುಳಿತು ಊಟ ಮಾಡಿ, ಟಿವಿ, ಮೊಬೈಲ್ ಯಾವ ಡಿಸ್ಟ್ರಾಕ್ಷನ್ ಇಲ್ಲದೆ ಊಟ, ಮಾತುಕತೆ ಬಗ್ಗೆ ಗಮನ ಹರಿಸಿ.
- ಸ್ವಲ್ಪವೇ ಸಮಯ ಸಿಗಲಿ, ಕ್ವಾಲಿಟಿ ಚೆನ್ನಾಗಿರಲಿ, ಮಕ್ಕಳ ಜೊತೆ ಆಟ ಆಡುವುದು, ಅವರ ಹೋಮ್ ವರ್ಕ್ ಮಾಡಿಸುವುದು. ಅವರ ಕ್ರಿಯೇಟಿವಿಟಿ ಹೆಚ್ಚಿಸುವ ಕೆಲಸಗಳನ್ನು ಮಾಡಿ.
- ಮಕ್ಕಳಿಗಿಂತ ಮೊಬೈಲ್ ಮುಖ್ಯವಲ್ಲ, ಎಂಟರ್‌ಟೈನ್‌ಮೆಂಟ್‌ಗಿಂತ ಜೀವನ ಮುಖ್ಯ ನೆನಪಿರಲಿ.
- ನೀವು ಈಗ ಹೇಗೆ ಅವರನ್ನು ನೋಡಿಕೊಳ್ಳುತ್ತೀರೋ ವಯಸ್ಸಾದ ನಂತರ ಅವರು ನಿಮ್ಮನ್ನು ಹಾಗೇ ನೋಡಿಕೊಳ್ತಾರೆ, ನೀವೇನೋ ಜೀವನದ ಕಷ್ಟ ಹೇಳಿಕೊಳ್ಳುವಾಗ ಮಕ್ಕಳು ಮೊಬೈಲ್ ನೋಡ್ತಾ ನಕ್ಕರೆ ಹೇಗೆ ಅನಿಸುತ್ತದೆ?
ನೀವು ಮಾಡುತ್ತಿರುವುದು ದೊಡ್ಡ ಅಪರಾಧ ಅಲ್ಲ, ಈ ಕ್ಷಣವೇ ಈ ಅಭ್ಯಾಸವನ್ನು ತಿದ್ದಿಕೊಳ್ಳಬಹುದು. ಇಂದಿನಿಂದಲೇ ಬದಲಾಗಬಹುದು, ನೆನಪು ಮಾಡಿಕೊಳ್ಳಿ, ಆರೋಗ್ಯಕರವಾದ ಒಂದು ಮಗು ಬೇಕೆಂದು ನೀವೆಷ್ಟು ಕನಸು ಕಂಡಿದ್ದೀರಿ, ಉತ್ತಮ ಜೀವನ ಕೊಡುವುದರ ಆರಂಭ ಇಂದಿನಿಂದಲೇ ಆಗಲಿ. ಕೈಯಲ್ಲಿರುವ ಮೆಟಲ್ ಬಾಕ್ಸ್ ಎಸೆದು ಮಕ್ಕಳ ಕಣ್ಣಲ್ಲಿ ಕಣ್ಣಿಡಿ!