ಟಿಪ್ಪುವನ್ನು ಕೊಂದಿದ್ದು ಬ್ರಿಟೀಷರಲ್ಲ, ನೈಜ ಇತಿಹಾಸ ಬೇರೆಯೇ ಇದೆ: ಸಿ.ಟಿ. ಮಂಜು

ಹೊಸದಿಗಂತ ವರದಿ, ಮಂಡ್ಯ
ಟಿಪ್ಪುಸುಲ್ತಾನ್‌ನನ್ನು ಬ್ರಿಟೀಷರು ಕೊಲ್ಲಲಿಲ್ಲ. ಬದಲಿಗೆ ಮೈಸೂರು ಒಡೆಯರ್‌ರ ಬಂಟರಾಗಿದ್ದ ಮಳವಳ್ಳಿಯ ದೊಡ್ಡನಂಜೇಗೌಡ ಮತ್ತು ಉರಿಗೌಡ ಎಂಬುವರು ಹತ್ಯೆ ಮಾಡಿದರು ಎಂದು ಬಿಜೆಪಿ ಮುಖಂಡ ಸಿ.ಟಿ. ಮಂಜುನಾಥ್ ತಿಳಿಸಿದರು.
ಹಿಂದೂ ಸಂಘಟನೆಗಳ ವತಿಯಿಂದ ನಗರದ ಬನ್ನೂರು ರಸ್ತೆಯಲ್ಲಿರುವ ಬಸವಭವನದ ಬಳಿ ನಡೆದ ಶೌರ್ಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಟಿಪ್ಪು ಬ್ರಿಟೀಷರ ಜೊತೆ ಹೋರಾಡುತ್ತಾ ವೀರಮರಣವನ್ನಪ್ಪಿದ ಎಂಬ ಮಾಹಿತಿಯನ್ನು ನಮ್ಮ ಶಾಲಾ ಪಠ್ಯಗಳು ಕೊಡುತ್ತವೆ. ಆದರೆ, ಮೈಸೂರಿನ ಇತಿಹಾಸದ ಪುಸ್ತಕಗಳು ಬೇರೆಯೇ ಕಥೆ ಹೇಳುತ್ತವೆ ಎಂದು ತಿಳಿಸಿದರು.
ಟಿಪ್ಪುವಾಗಲೀ, ಆತನ ತಂದೆ ಹೈದರಾಲಿಯಾಗಲೀ ರಾಜವಂಶದ ಹಿನ್ನೆಲೆಯುಳ್ಳವರಲ್ಲ. 1749ರಲ್ಲಿ ಮೈಸೂರು ಸಂಸ್ಥಾನದ ಸೈನ್ಯದಲ್ಲಿ ಒಬ್ಬ ಸಾಮಾನ್ಯ ಸೈನಿಕನಾಗಿ ಸೇರುವ ಹೈದರಾಲಿ ಮುಂದೆ ಸೇನಾಧಿಪತಿಯ ಮಟ್ಟಕ್ಕೆ ಬೆಳೆದು ಕೊನೆಗೆ 1761ರಲ್ಲಿ ಮೈಸೂರು ಅರಸ ಎರಡನೇ ಕೃಷ್ಣರಾಜ ಒಡೆಯರ್‌ರನ್ನು ಗೃಹಬಂಧನದಲ್ಲಿಡುತ್ತಾನೆ. ಸರ್ವಾಧಿಕಾರಿಯಾಗಿ ಆಳುತ್ತಿದ್ದರೂ, ಹೊರಗಿನ ಜಗತ್ತಿಗೆ ತಾನು ಮಹಾರಾಜರ ಪ್ರತಿನಿಧಿ ಎಂದೇ ಬಿಂಬಿಸಿಕೊಳ್ಳುತ್ತಾನೆ. ಇದೇ ರೀತಿ ಆತ ಅರಸನನ್ನು ಒತ್ತೆ ಇಟ್ಟುಕೊಂಡು 21 ವರ್ಷ ರಾಜ್ಯಭಾರ ಮಾಡಿದ್ದ ಹೈದರಾಲಿ ಯುದ್ಧವೊಂದರಲ್ಲಿ ಸಾವಿಗೀಡಾದಾಗ 1782ರಲ್ಲಿ ಆತನ ಮಗ ಟಿಪ್ಪು ಪಟ್ಟಕ್ಕೆ ಬಂದ. ಮೈಸೂರು ಅರಸರಿಂದ ದೂರವಾಗಲು ಶ್ರೀರಂಗಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಆಯ್ಕೆ ಮಾಡಿಕೊಂಡ ಎಂದು ವಿವರಿಸಿದರು.
ಹೈದರಾಲಿಯ ನಿಧನಾನಂತರ ಮೈಸೂರನ್ನು ತನ್ನ ಕೈಯಲ್ಲೇ ಉಳಿಸಿಕೊಳ್ಳಲು ರಾಜಮಾತೆ ಲಕ್ಷ್ಮಿ ಅಮ್ಮಣ್ಣಿಯವರು ಪ್ರಯತ್ನಿಸಿದಾಗ ಟಿಪ್ಪು ಪ್ರತಿರೋಧ ಒಡ್ಡಿದ. ಅವರಿಗೆ ಸಹಾಯ ಮಾಡುತ್ತಿದ್ದ ಎಲ್ಲರನ್ನೂ ನಿರ್ಧಯವಾಗಿ ವಧಿಸಿ, ರಾಜಮಾತೆಯನ್ನು ಒಂಟಿಯಾಗಿಸಿದ. ಹೇಗಾದರೂ ಮಾಡಿ ತನ್ನ ಸಂಸ್ಥಾನವನ್ನು ಉಳಿಸಿಕೊಳ್ಳಲೇಬೇಕೆಂಬ ಹಠಕ್ಕೆ ಬಿದ್ದ ರಾಜಮಾತೆ, ಅದಕ್ಕಾಗಿ ತಿರುಮಲೈ ಅಯ್ಯಂಗಾರರ ಮೂಲಕ ಬ್ರಿಟೀಷರ ಸಹಾಯ ಕೋರಿದರು. ಆಗಿನ ವೈಸ್‌ರಾಯ್ ಆಗಿದ್ದ ಲಾರ್ಡ್ ವೆಲ್ಲೆಸ್ಲಿ ಮೈಸೂರಿನಲ್ಲಿ ಟಿಪ್ಪುವನ್ನು ಸೋಲಿಸಲು ಜನರಲ್ ಹ್ಯಾರಿಸ್ ಎಂಬಾತನಿಗೆ ನಾಯಕತ್ವ ಕೊಡುತ್ತಾನೆ. ಈ ವಿಚಾರಗಳನ್ನು ಇತಿಹಾಸದಲ್ಲಿ ತಿರುಚಲಾಗಿದೆ ಎಂದರು.
ಈ ವೇಳೆ ಮಳವಳ್ಳಿಯಲ್ಲಿದ್ದ ದೊಡ್ಡನಂಜೇಗೌಡ ಮತ್ತು ಉರಿಗೌಡ ಎಂಬ ಇಬ್ಬರು ಒಡೆಯರ್‌ರವರ ನಿಷ್ಠ ಸೇನಾನಿಗಳು ರಾಜಮಾತೆ ಲಕ್ಷ್ಮೀ ಅಮ್ಮಣ್ಣಿಯವರ ಅಪ್ಪಣೆ ಮೇರೆಗೆ ಬ್ರಿಟೀಷರ ಜೊತೆ ಸೇರಿ ಟಿಪ್ಪುವನ್ನು ಮಣಿಸಲು ಶಪಥ ತೊಟ್ಟರು ಎಂದರು.
ಟಿಪ್ಪು ಮತ್ತು ಬ್ರಿಟೀಷರ ನಡುವೆ ಯುದ್ಧ ಸಂಭವಿಸಿತ್ತು. 1799ರ ಮಾರ್ಚ್ 27ರಂದು ಇನ್ನೇನು ಕೈಗೆ ಸಿಕ್ಕೇಬಿಟ್ಟನೆಂಬಂತೆ ಸನಿಹ ಬಂದಿದ್ದ ಟಿಪ್ಪು ಇವರೆಲ್ಲರ ಕೈಯಿಂದ ತಪ್ಪಿಸಿಕೊಂಡು ಶ್ರೀರಂಗಪಟ್ಟಣದ ಕೋಟೆ ಸೇರಿಕೊಂಡಿದ್ದ. ಅದೇ ವರ್ಷ ಮೇ. 4ರಂದು ಬ್ರಿಟೀಷರು ಕೋಟೆಯನ್ನು ಮುತ್ತಿಗೆ ಹಾಕಿ ಒಳಬರುವುದು ಖಚಿತವಾದಾಗ ಟಿಪ್ಪು ಜನಸಾಮಾನ್ಯರಂತೆ ವೇಷ ಧರಿಸಿ ಪಲಾಯನ ಮಾಡಲು ಯತ್ನಿಸಿದ. ಆದರೆ, ಕೋಟೆಯ ಒಳಗಿದ್ದವರನ್ನೆಲ್ಲ ದೊಡ್ಡನಂಜೇಗೌಡ ಹಾಗೂ ಉರಿಗೌಡ ಇವರ ಸೈನ್ಯ ಸಾಯಿಸಿತ್ತು. ಇವರಿಂದ ಹತ್ಯೆಯಾದವರ ಶವಗಳ ಮಧ್ಯದಲ್ಲಿ ಟಿಪ್ಪು ಕೂಡ ಸತ್ತುಬಿದ್ದಿದ್ದ ಎಂದು ತಿಳಿಸಿದರು.
ಬ್ರಿಟೀಷರು ಟಿಪ್ಪುವನ್ನು ಹುಡುಕಿಕೊಂಡು ಬಂದಾಗ ಶವಗಳ ಪರಿಶೀಲನೆ ನಡೆಸಿ, ಹೆಣಗಳ ಮಧ್ಯದಲ್ಲಿದ್ದ ಟಿಪ್ಪು ಶವವನ್ನು ಗುರುತಿಸಲಾಯಿತು. ಟಿಪ್ಪುವಿನ ಶವ ಸಿಕ್ಕ ಜಾಗವನ್ನು ಇಂದಿಗೂ ಶ್ರೀರಂಗಪಟ್ಟಣದಲ್ಲಿ ನೋಡಬಹುದಾಗಿದೆ ಎಂದರು.
ಹಿಂದೂ ಪರ ಕಾರ್ಯಕರ್ತರಾದ ಗಂಗಾಧರ್, ಪ.ಮಾ. ರಮೇಶ್, ಹಿರೇಮರಳಿ ಮಂಜುನಾಥ್, ಸುರೇಶ್, ದೊರೆಸ್ವಾಮಿ, ಲಕ್ಷ್ಮೀಸಾಗರ ಸುನಿಲ್‌ಕುಮಾರ್, ಅನಿಲ್, ಶ್ರೀನಿವಾಸ್ ನಾಯ್ಕ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!