ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಡವಿಗೊಡೆಯನ ನಾಡು ಉಡುಪಿಯಲ್ಲಿ ಅಷ್ಟಮಿ ಸಂಭ್ರಮ ಕಳೆಗಟ್ಟಿದ್ದು, ಇಂದು (ಸೆ.14) ರಾತ್ರಿ 12.11ಕ್ಕೆ ಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಲಿದೆ. ನಾಳೆ ವೈಭವದ ವಿಟ್ಲಪಿಂಡಿ ಮಹೋತ್ಸವ ಸಂಪನ್ನಗೊಳ್ಳಲಿದೆ.
ಈ ಸಂಭ್ರಮ ಕಣ್ತುಂಬಿಕೊಳ್ಳಲು ರಾಜ್ಯ ಹೊರ ರಾಜ್ಯಗಳಿಂದ ಭಕ್ತ ಪ್ರವಾಹವೇ ಉಡುಪಿಗೆ ಹರಿದುಬರುತ್ತಿದ್ದು, ಇಲ್ಲಿನ ಶ್ರೀಕೃಷ್ಣ ಮಠ, ರಾಜಾಂಗಣ, ರಥಬೀದಿ, ಗೀತಾ ಮಂದಿರ, ರಾಜಬೀದಿಗಳು ವಿದ್ಯದ್ದೀಪಾಲಂಕೃತವಾಗಿ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿವೆ.

ಇನ್ನೊಂದೆಡೆ ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚುವ ಸಲುವಾಗಿ ಚಕ್ಕುಲಿ, ಉಂಡೆಗಳ ತಯಾರಿಯೂ ಭರದಿಂದ ಸಾಗುತ್ತಿದೆ. ಈಗಾಗಲೇ 1.50 ಲಕ್ಷ ಚಕ್ಕುಲಿ ಹಾಗೂ 3.50 ಲಕ್ಷ ಲಡ್ಡು ಸಿದ್ಧಪಡಿಸಲಾಗಿದೆ. ಅಷ್ಟಮಿಯ ಮರುದಿನ ನಡೆಯುವ ಅನ್ನ ಸಂತರ್ಪಣೆಯಲ್ಲಿ ಇದನ್ನು ವಿತರಿಸಲಾಗುತ್ತದೆ.

ವಿಟ್ಲಪಿಂಡಿ ದಿನದಂದು ಪ್ರದರ್ಶನ ನೀಡಲು ಹುಲಿವೇಷ ತಂಡಗಳು ಕೂಡಾ ಭರ್ಜರಿ ಸಿದ್ಧತೆ ನಡೆಸಿವೆ. ನಾಳೆ ಮಹಾರಾಷ್ಟ್ರದ ಪುಣೆಯ ಆಲಾರೆ ತಂಡದವರು ಕನಕ ಗೋಪುರದ ಎದುರು ಪ್ರದರ್ಶನ ನೀಡಲಿದ್ದಾರೆ. ರಥಬೀದಿಯ ವಿವಿಧೆಡೆ ಮೊಸರು ಕುಡಿಕೆಗಾಗಿ 13 ಗುರ್ಜಿಗಳನ್ನು ನೆಡಲಾಗಿದೆ. ಈ ಗುರ್ಜಿಗಳಿಗೆ ನೇತುಹಾಕುವ ಮೊಸರು ಕುಡಿಕೆಗಳನ್ನು ವಿಟ್ಲಪಿಂಡಿ ಮಹೋತ್ಸವದ ವೇಳೆ ಗೊಲ್ಲ ವೇಷಧಾರಿಗಳು ಒಡೆಯಲಿದ್ದಾರೆ.