ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲೆಂಡ್ ವಿರುದ್ಧದ ಸೆಮೀಸ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಿಗ್ಗಜ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಎರಡು ದಾಖಲೆಗಳನ್ನು ಮುರಿದಿದ್ದಾರೆ.
ಇದೇ ವಿಶ್ವಕಪ್ನಲ್ಲಿ ಏಕದಿನ ಕ್ರಿಕೆಟ್ನ 49ನೇ ಶತಕ ಗಳಿಸಿ ಸಚಿನ್ ದಾಖಲೆ ಸರಿಗಟ್ಟಿದ್ದ ವಿರಾಟ್, ಇಂದು 50ನೇ ಶತಕ ಮಾಡಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ವಿರಾಟ್ ಕೊಹ್ಲಿಯ ಈ ಇನ್ನಿಂಗ್ಸ್ ನೋಡಿದ ಎಲ್ಲರೂ ಹುಚ್ಚೆದ್ದು ಕುಣಿದರು. ಸ್ವತಃ ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಕೂಡ ವಿರಾಟ್ ಕೊಹ್ಲಿಯ ಶತಕಕ್ಕೆ ಎದ್ದು ನಿಂತು ಚಪ್ಪಾಳೆ ತಟ್ಟುತ್ತ ಅಭಿನಂದನೆ ಸಲ್ಲಿಸಿದರು.
ಇದೀಗ ಕೊಹ್ಲಿ ಶತಕವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಚಿನ್ ತೆಂಡೂಲ್ಕರ್ ಹಾಡಿ ಹೊಗಳಿದ್ದಾರೆ.
‘ನಾನು ನಿಮ್ಮನ್ನು (ವಿರಾಟ್ ಕೊಹ್ಲಿ) ಮೊದಲ ಬಾರಿಗೆ ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಭೇಟಿಯಾದಾಗ, ಇತರ ಸಹ ಆಟಗಾರರು ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಎಂದು ನಿಮಗೆ ಹೇಳಿದ್ದರು. ನೀವು ಹಾಗೆ ಮಾಡಲು ಬಂದಾಗ ತಮಾಷೆ ಮಾಡಿ ನಕ್ಕಿದ್ದರು. ನನಗೂ ಸಹ ನಗು ತಡೆಯಲಾಗಲಿಲ್ಲ. ಆದರೆ ಶೀಘ್ರದಲ್ಲೇ ನೀವು ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದ ನನ್ನ ಹೃದಯವನ್ನು ಮುಟ್ಟಿದ್ದೀರಿ. ಅಂದಿನ ಚಿಕ್ಕ ಹುಡುಗ ‘ವಿರಾಟ್’ ಆಟಗಾರನಾಗಿದ್ದಾನೆ ಎಂಬುದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ. ಭಾರತೀಯನೊಬ್ಬ ನನ್ನ ದಾಖಲೆಯನ್ನು ಮುರಿದಿದ್ದಕ್ಕೆ ನಾನು ಹೆಚ್ಚು ಸಂತೋಷಪಡಲು ಸಾಧ್ಯವಿಲ್ಲ. ವಿಶ್ವಕಪ್‌ನ ಅತಿದೊಡ್ಡ ವೇದಿಕೆಯಲ್ಲಿ ಅದರಲ್ಲೂ ನನ್ನ ತವರು ನೆಲದಲ್ಲಿ, ಸೆಮಿ-ಫೈನಲ್ನಲ್ಲಿ ಈ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಬರೆದುಕೊಂಡಿದ್ದಾರೆ.