ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಬಿಗ್ ಬಜೆಟ್ ಸಿನಿಮಾ ‘ರಾಮಾಯಣ’ ಚಿತ್ರತಂಡವು ದಸರಾ ಹಬ್ಬದ ವಿಶೇಷವಾಗಿ ಚಿತ್ರದ ಎರಡನೇ ಹಾಡಾದ ‘ರಾವಣ ತಾಂಡವ’ವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ನಟ ‘ಯಶ್’ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಭೀಕರ ಹಾಗೂ ಗಂಭೀರ ರೂಪ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ. ಆದರೆ, ಮತ್ತೊಂದೆಡೆ ಈ ಹಾಡಿನ ಸಂಗೀತ ನಿರ್ದೇಶನಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹಾಗೂ ನಿರಾಸೆ ವ್ಯಕ್ತವಾಗಿದೆ.
ಸುಮಾರು ಎರಡು ನಿಮಿಷಗಳ ಕಾಲವಿರುವ ಈ ವಿಡಿಯೋದಲ್ಲಿ, ರಾವಣನ ಶಿವಭಕ್ತಿ ಮತ್ತು ಆತನ ಅಚಲ ಶ್ರದ್ಧೆಯನ್ನು ಅದ್ಭುತವಾಗಿ ತೆರೆದಿಡಲಾಗಿದೆ. ತನ್ನ ಕೈಯನ್ನು ಕತ್ತಿಯಿಂದ ಕೊಯ್ದು ಹಣೆಗೆ ತಿಲಕ ಇಟ್ಟುಕೊಳ್ಳುವ ದೃಶ್ಯದಿಂದ ವಿಡಿಯೋ ಆರಂಭವಾಗುತ್ತದೆ. ಬೃಹತ್ ಶಿವನ ಮೂರ್ತಿಯ ಮುಂದೆ ಆರತಿ ಬೆಳಗಿ, ತದನಂತರ ರಾವಣ ತಾಂಡವ ನೃತ್ಯ ಮಾಡುವ ಸನ್ನಿವೇಶಗಳು ರೋಮಾಂಚನಕಾರಿಯಾಗಿ ಮೂಡಿಬಂದಿವೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಅವರ ಲುಕ್ ಮತ್ತು ನೃತ್ಯ ಸಂಯೋಜನೆಗೆ ಎಲ್ಲೆಡೆಯಿಂದ ಭರ್ಜರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಯಶ್ ಅಭಿನಯ ಮತ್ತು ಡಾ.ಕುಮಾರ್ ವಿಶ್ವಾಸ್ ಅವರ ಸಾಹಿತ್ಯ ಹಾಗೂ ವಿಶಾಲ್ ದದ್ಲಾನಿ ಅವರ ಗಾಯನಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಮ್ಯೂಸಿಕ್ ಬಗ್ಗೆ ಅನೇಕರು ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ. ಹೈ-ವೋಲ್ಟೆಜ್ ಇರಬೇಕಾದ ‘ತಾಂಡವ’ ಹಾಡು ನಿರೀಕ್ಷಿತ ಮಟ್ಟದಲ್ಲಿ ಶಕ್ತಿಶಾಲಿಯಾಗಿಲ್ಲ ಎಂದು ಸಿನಿಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ಗಳ ಸುರಿಮಳೆಯೇ ಹರಿದುಬಂದಿದ್ದು, ರೆಹಮಾನ್ ಈ ಸಿನಿಮಾಗೆ ತಪ್ಪು ಆಯ್ಕೆ ಎಂದು ಕೆಲವರು ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರದ ಎರಡನೇ ಭಾಗದಲ್ಲಾದರೂ ರೆಹಮಾನ್ ಬದಲಿಗೆ ಬೇರೆ ಸಂಗೀತ ನಿರ್ದೇಶಕರನ್ನು ತೆಗೆದುಕೊಳ್ಳಿ ಎಂದು ನಿರ್ಮಾಪಕರಿಗೆ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿಯ ಜರ್ಮನ್ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಜೊತೆಗೂಡಿ ರೆಹಮಾನ್ ಈ ಚಿತ್ರಕ್ಕೆ ಕೆಲಸ ಮಾಡುತ್ತಿರುವುದು ವಿಶೇಷ. ದೊಡ್ಡ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರ, ಮುಂದಿನ ದಿನಗಳಲ್ಲಿ ಸಂಗೀತ ವಿಚಾರದ ಟೀಕೆಗಳಿಗೆ ಚಿತ್ರತಂಡ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.



