ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ನ ಹಮಾಸ್ ಉಗ್ರರ ನಡುವಿನ ಯುದ್ಧಕ್ಕೆ ಸಂಬಂಧಿಸಿದಂತೆ ಹಮಾಸ್ ಉಗ್ರರನ್ನು ಬೆಂಬಲಿಸಿ ಸಾಮಾಜಿಕ ತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ ಮಂಗಳೂರಿನ ಬಂದರು ನಿವಾಸಿ ಝಾಕೀರ್ ಯಾನೆ ಝಾಕಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತನ್ನ ವೇಷಭೂಣಗಳಿಂದ ತಾಲಿಬಾನ್ ಝಾಕೀರ್ ಎಂದೇ ಕುಖ್ಯಾತಿ ಪಡೆದಿದ್ದ ಈತನ ವಿರುದ್ಧ ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈತ ಹಮಾಸ್ ಉಗ್ರರ ಪರ ವಿಡಿಯೋ ಹರಿಯಬಿಟ್ಟು ಕೋಮು ಪ್ರಚೋದನೆ ನಡೆಸಿದ್ದಾನೆ. ಆತ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಸಾಧ್ಯತೆ ಇದ್ದು, ಈತನಿಗೆ ಉಗ್ರರ ನಂಟಿನ ಸಾಧ್ಯತೆ ಇದೆ. ಈತನ ವಿವಾದಾತ್ಮಕ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈತನನ್ನು ಬಂಧಿಸಿ ತನಿಖೆ ನಡೆಸುವಂತೆ ವಿಶ್ವಹಿಂದು ಪರಿಷತ್ ಮುಖಂಡ ಪ್ರದೀಪ್ ಕುಮಾರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.