April 28, 2026
Tuesday, April 28, 2026
spot_img

ಕೊಡಗು ಪ್ರವಾಸಕ್ಕೆ ಬಂದ ಇರಾನ್ ದಂಪತಿಗೆ ಇಕ್ಕಟ್ಟು ತಂದಿಟ್ಟಿದೆ ಮಧ್ಯಪ್ರಾಚ್ಯ ಯುದ್ಧ ಬಿಕ್ಕಟ್ಟು

ಹೊಸದಿಗಂತ ಮಡಿಕೇರಿ:


ಮಧ್ಯಪ್ರಾಚ್ಯ ಯುದ್ಧ ಬಿಕ್ಕಟ್ಟು ಇಲ್ಲೊಂದು ದಂಪತಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತಮ್ಮ ಮಕ್ಕಳನ್ನು ಬಿಟ್ಟು ಇರಾನ್‌ನಿಂದ ಕೊಡಗಿಗೆ ಬಂದಿದ್ದ ದಂಪತಿ ಮರಳಿ ಊರಿಗೆ ತೆರಳಲು ವಿಮಾನ ಸೇವೆ ಇಲ್ಲದೆ ಇಲ್ಲಿಯೇ ಸಿಲುಕಿಕೊಂಡಿದ್ದಾರೆ.


ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಾಂತೂರಿನವರಾದ ನವೀನಾ ಅವರು 40 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಇರಾನ್‌ನ ನಾದರ್ ಅವರೊಂದಿಗೆ ಪರಿಚಯವಾಗಿ, ಬಳಿಕ ಪ್ರೀತಿಸಿ ವಿವಾಹವಾದರು.


ಮದುವೆಯ ನಂತರ ದಂಪತಿ ಇರಾನ್‌ನ ಬೋಜ್‌ನೂರ್ ಪ್ರದೇಶದಲ್ಲಿ ನೆಲೆಸಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬರು ಸಿವಿಲ್ ಎಂಜಿನಿಯರ್ ಮತ್ತು ಮತ್ತೊಬ್ಬರು ಆರ್ಕಿಟೆಕ್ಟ್ ಆಗಿದ್ದಾರೆ. ಈ ಕುಟುಂಬ ಇರಾನಿನಲ್ಲಿ ದಾಳಿಂಬೆ, ದ್ರಾಕ್ಷಿ, ಸೇಬು, ಬ್ಲೂಬೆರಿ, ಬಾದಾಮಿ, ಖರ್ಜೂರ, ಪಿಸ್ತಾ ಸೇರಿದಂತೆ ಹಲವು ಹಣ್ಣುಗಳ ಫಾರ್ಮ್‌ಗಳನ್ನು ಹೊಂದಿದ್ದು, ಜೊತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆನ್ನಲಾಗಿದೆ.


ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಕೊಡಗಿಗೆ ಬರುತ್ತಿದ್ದ ದಂಪತಿ ಮಾರ್ಚ್‌ನಲ್ಲಿ ಇರಾನ್‌ಗೆ ಮರಳುತ್ತಿದ್ದರು. ಈ ಬಾರಿಯೂ ಡಿಸೆಂಬರ್‌ನಲ್ಲಿ ಕೊಡಗಿಗೆ ಬಂದಿದ್ದ ಇವರು ಮಾ.16ರಂದು ಬೆಂಗಳೂರಿನಿಂದ ಶಾರ್ಜಾ ಮೂಲಕ ಇರಾನ್‌ನ ಬೋಜ್‌ನೂರ್‌ಗೆ ತೆರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಆದರೆ ಅಮೆರಿಕ- ಇರಾನ್ ಯುದ್ಧದ ಪರಿಣಾಮವಾಗಿ ವಿಮಾನ ರದ್ದಾಯಿತು. ನಂತರ ಏ. 15ಕ್ಕೆ ಮತ್ತೊಮ್ಮೆ ಪ್ರಯಾಣ ಬುಕ್ ಮಾಡಿದ್ದರು. ಆ ವಿಮಾನವೂ ರದ್ದಾಗಿದ್ದು, ಯುದ್ಧ ಇನ್ನಷ್ಟು ಮುಂದುವರಿದರೆ ಅವರು ಕೊಡಗಿನಲ್ಲೇ ಇನ್ನಷ್ಟು ದಿನ ಉಳಿಯಬೇಕಾಗುತ್ತದೆ. ಇದರೊಂದಿಗೆ ಅವರ ಪಾಸ್‌ಪೋರ್ಟ್ ಅವಧಿ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಇದರಿಂದಾಗಿ ದಂಪತಿ ಆತಂಕಕ್ಕೆ ಒಳಗಾಗಿದ್ದಾರೆ.


ಮತ್ತೊಂದೆಡೆ ದಂಪತಿಯ ಪಾಸ್‌ಪೋರ್ಟ್ ಅವಧಿ ಮುಗಿಯುವ ಹಂತದಲ್ಲಿದ್ದು, ಮತ್ತೆ ಇರಾನ್‌ಗೆ ಹೋಗಲು ಸಾಧ್ಯವಾಗುತ್ತದೆಯೋ, ಇಲ್ಲವೋ ಎಂಬ ಆತಂಕದಲ್ಲಿ ಈ ದಂಪತಿ ದಿನ ಕಳೆಯುತ್ತಿದ್ದಾರೆ. ಇದರ ಜೊತೆಗೆ ಇರಾನ್‌ನಲ್ಲಿ ಇಂಟರ್ನೆಟ್ ಸೇವೆಗಳು ಬಹುತೇಕ ಸ್ಥಗಿತಗೊಂಡಿರುವ ಪರಿಣಾಮ ತಮ್ಮ ಮಕ್ಕಳನ್ನೂ ಸಂಪರ್ಕಿಸಲು ಕೂಡಾ ಅವರಿಗೆ ಸಾಧ್ಯವಾಗುತ್ತಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !