ಹೊಸದಿಗಂತ ವರದಿ, ಸೋಮವಾರಪೇಟೆ:
ಸಮಯ ಮೀರಿದರೂ ಸಭೆಗೆ ಬಾರದ ಶಾಸಕರು, ಆಡಳಿತಾಧಿಕಾರಿಗಳನ್ನು ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ಸೋಮವಾರಪೇಟೆ ಪಟ್ಟಣ ಪಂಚಾಯ್ತಿ ಸಭೆಯಲ್ಲಿ ನಡೆದಿದೆ.
ಅಧ್ಯಕ್ಷ,ಉಪಾಧ್ಯಕ್ಷರ ಅವಧಿ ಮುಗಿದು ಐದು ತಿಂಗಳ ನಂತರ ಆಡಳಿತಾಧಿಕಾರಿ ತಹಶೀಲ್ದಾರ್ ಎಸ್. ಎನ್. ನರಗುಂದ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಗ್ಗೆ 10ಗಂಟೆಗೆ ಸಭೆ ನಿಗದಿಯಾಗಿತ್ತು.
ಹಿಂದಿನ ದಿನ ರಾತ್ರಿ ಮುಖ್ಯಾಧಿಕಾರಿ ನಾಚಪ್ಪ ಎಲ್ಲರಿಗೂ ದೂರವಾಣಿ ಕರೆಮಾಡಿ ಹತ್ತು ಗಂಟೆಗೆ ಬದಲಾಗಿ ಹನ್ನೊಂದು ಗಂಟೆಗೆ ಸಭೆ ಎಂದು ತಿಳಿಸಿದ ಹಿನ್ನಲೆಯಲ್ಲಿ ಮಾಧ್ಯಮದವರು ಸೇರಿದಂತೆ ಎಲ್ಲರೂ ಹನ್ನೊಂದು ಗಂಟೆಗೆ ಸರಿಯಾಗಿ ಸಭಾಂಗಣದಲ್ಲಿ ಹಾಜರಿದ್ದರು.
ಆದರೆ ಶಾಸಕರು ಮಾತ್ರ ಇನ್ನು ಹತ್ತು ನಿಮಿಷದಲ್ಲಿ ಬರುತ್ತಾರೆ ಎಂದವರು ಗಂಟೆ ಉರುಳಿದರೂ ಸುಳಿವಿಲ್ಲದ್ದರಿಂದ ಅಸಮಾಧಾನಗೊಂಡ ಬಿಜೆಪಿ ಸದಸ್ಯರು ‘ಹನ್ನೊಂದು ಗಂಟೆಗೆ ಸಭೆ ಎಂದು ಈಗ ಹನ್ನೆರಡು ಗಂಟೆಯಾದರೂ ಸಭೆ ಪ್ರಾರಂಭಿಸಿಲ್ಲ. ಆಡಳಿತಾಧಿಕಾರಿಗಳು ಅಧ್ಯಕ್ಷರ ಕೊಠಡಿಯಲ್ಲಿ ಕುಳಿತಿದ್ದಾರೆ ನಾವಿಲ್ಲಿ ಏನು ಮಾಡೋದು ಎಂದು ಸಭಾತ್ಯಾಗ ನಡೆಸಿ, ಅಧ್ಯಕ್ಷರ ಕೊಠಡಿಯಲ್ಲಿ ಕುಳಿತಿದ್ದ ಆಡಳಿತಾಧಿಕಾರಿ ನರಗುಂದ ಅವರನ್ನು ತರಾಟೆಗೆ ತೆಗೆದುಕೊಂಡರು.
ನಾವು ಗಂಟೆಯಿಂದ ಕಾಯುತ್ತಿದ್ದೇವೆ ಶಾಸಕರು ಪತ್ತೆಯಿಲ್ಲ ನೀವು ಇಲ್ಲಿ ಕುಳಿತುಕೊಂಡಿದ್ದೀರಾ, ನಮಗೇನು ಕೆಲಸ ಇಲ್ಲವಾ ನೀವು ಸಭೆ ಆರಂಭಿಸಿ ಶಾಸಕರು ಬಂದು ಸೇರಿಕೊಳ್ಳುತ್ತಾರೆ ಎಂದು ಆಗ್ರಹಿಸಿದರು.
ಹತ್ತು ನಿಮಿಷದಲ್ಲಿ ಶಾಸಕರು ಬರುತ್ತಾರೆ ಆರಂಭಿಸೋಣ ಎಂದು ಆಡಳಿತಾಧಿಕಾರಿಗಳು ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ ಸದಸ್ಯರು ಒಪ್ಪದಿದ್ದಾಗ ಅನಿವಾರ್ಯವಾಗಿ ಸಭೆ ಆರಂಭಿಸಬೇಕಾಯಿತು. ಒಂದೂಕಾಲು ಗಂಟೆ ತಡವಾಗಿ ಅಂದರೆ ಹನ್ನೆರಡು ಹದಿನೈದಕ್ಕೆ ಶಾಸಕ ಮಂಥರ್ ಗೌಡ ಬಂದು ಸಭೆಗೆ ಸೇರಿಕೊಂಡರು.