August 28, 2026
Friday, August 28, 2026
spot_img

ಮನುಷ್ಯರನ್ನ ಕಂಡ್ರೆ ಸಾಕು 100 ಸ್ಪೀಡಲ್ಲಿ ಎಸ್ಕೇಪ್.. ಪಶ್ಚಿಮ ಘಟ್ಟದ ಪಕ್ಕಾ ‘ಶೈ ಬಾಯ್’ ಇವನು!

ನಮ್ಮ ಪಶ್ಚಿಮ ಘಟ್ಟಗಳ ದಟ್ಟ ಕಾಡಿನಲ್ಲಿ, ಮರದಿಂದ ಮರಕ್ಕೆ ಸುಮ್ಮನೆ ಜಿಗಿದು ಹಾರಾಡುವ ಒಂದು ಅಲ್ಟ್ರಾ-ಸ್ಮಾರ್ಟ್ ಪ್ರಾಣಿ ಇದೆ. ಅದೇ ನಮ್ಮ ‘ನೀಲಗಿರಿ ಮಾರ್ಟೆನ್’ ಹೊರಗಿನ ಪ್ರಪಂಚಕ್ಕೆ ಇದರ ಸುದ್ದಿ ಜಾಸ್ತಿ ಗೊತ್ತಿಲ್ಲದಿರಬಹುದು, ಆದ್ರೆ ಇದು ಬರೀ ಪ್ರಾಣಿ ಅಲ್ಲ, ಕಾಡಿನ ರಿಯಲ್ ‘ಸ್ಟೈಲಿಶ್ ಕಿಂಗ್’!

ನೀಲಗಿರಿ ಮಾರ್ಟೆನ್ ಹುಟ್ಟಿನ ಕಥೆ

ಈ ಕಿಲಾಡಿ ಮಾರ್ಟೆನ್ ಎಲ್ಲೋ ಹೊರಗಡೆಯಿಂದ ಬಂದಿದ್ದಲ್ಲ. ಇದರ ಹುಟ್ಟು, ಮನೆ, ಮಠ ಎಲ್ಲವೂ ನಮ್ಮ ಪಶ್ಚಿಮ ಘಟ್ಟಗಳು. ಮುಖ್ಯವಾಗಿ ತಮಿಳುನಾಡಿನ ನೀಲಗಿರಿ ಬೆಟ್ಟಗಳು, ಕೇರಳದ ಮುತ್ತಂಗ-ವಯನಾಡ್ ಭಾಗಗಳು ಮತ್ತು ನಮ್ಮ ಕರ್ನಾಟಕದ ಕೊಡಗು-ಚಿಕ್ಕಮಗಳೂರಿನ ದಟ್ಟ ಕಾಡುಗಳೇ ಇದರ ನೆಚ್ಚಿನ ವಾಸಸ್ಥಾನ. ಸಮುದ್ರ ಮಟ್ಟಕ್ಕಿಂತ 300 ರಿಂದ 2000 ಮೀಟರ್ ಎತ್ತರದಲ್ಲಿರೋ ದಟ್ಟ ಕಾಡುಗಳಲ್ಲಿ, ಮಂಜು ಮುಸುಕಿದ ಬೆಟ್ಟಗಳಲ್ಲೇ ಇದು ಹುಟ್ಟಿ ಬೆಳೆದಿದ್ದು. ಅದಕ್ಕೇ ಈ ಪ್ರಾಣಿಗೆ ‘ನೀಲಗಿರಿ’ ಅಂತಾನೇ ಹೆಸರಿಟ್ಟಿರೋದು.

ಲುಕ್ ಮಾತ್ರ ಕ್ರೇಜಿ

ನೋಡೋಕೆ ಒಂದು ಸಣ್ಣ ನಾಯಿ ಅಥವಾ ಬೆಕ್ಕಿನ ಗಾತ್ರ ಇರುತ್ತೆ, ಆದ್ರೆ ಇದರ ಸೌಂದರ್ಯಕ್ಕೆ ಸಾಟಿಯೇ ಇಲ್ಲ. ದೇಹವೆಲ್ಲ ಕಡು ಕಂದು ಅಥವಾ ಕಪ್ಪು ಬಣ್ಣದ ಥರ ಕೋಟ್ ಹಾಕೊಂಡಿದ್ರೆ, ಕುತ್ತಿಗೆ ಹತ್ರ ಮಾತ್ರ ಥೇಟ್ ಮಾವಿನಹಣ್ಣಿನ ತರ ಹೊಳೆಯುವ ಕಿತ್ತಳೆ-ಹಳದಿ ಬಣ್ಣದ ‘ಶಾಲ್’ ಹೊದ್ದುಕೊಂಡ ಹಾಗೆ ಕಾಣುತ್ತೆ.

ಮರ ಹತ್ತೋದ್ರಲ್ಲಿ ನೋ ಕಾಂಪ್ರಮೈಸ್

ನೆಲಕ್ಕಿಂತ ಮರದ ಕೊಂಬೆಗಳ ಮೇಲೆ ಓಡಾಡೋದೆಂದರೆ ಇದಕ್ಕೆ ಪಂಚಪ್ರಾಣ. ಮರ ಹತ್ತುವುದರಲ್ಲಿ ಇದಕ್ಕೆ ಸಾಟಿಯೇ ಇಲ್ಲ. ಎಷ್ಟೇ ಎತ್ತರದ ಮರವಾಗಲಿ, ಸೂಪರ್‌ಮ್ಯಾನ್ ಥರ ಚಕ್ಕನೆ ಹತ್ತಿ, ಕ್ವಿಕ್ ಆಗಿ ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತೆ.

ಆಹಾರ ಪದ್ಧತಿ

ಇದು ಬರೀ ಸಸ್ಯಹಾರಿನೂ ಅಲ್ಲ, ಪಕ್ಕಾ ಮಾಂಸಹಾರಿನೂ ಅಲ್ಲ. ಇಲಿ, ಹಕ್ಕಿ, ಹಾವು, ಹಣ್ಣು-ಹಂಪಲು ಜೊತೆಗೆ ಕಾಡಿನ ಜೇನುತುಪ್ಪ ಅಂದ್ರೆ ಇದಕ್ಕೆ ಸಿಕ್ಕಾಪಟ್ಟೆ ಇಷ್ಟ.

ಡೇ-ಶಿಫ್ಟ್ ವರ್ಕರ್

ಹೆಚ್ಚಿನ ಕಾಡು ಪ್ರಾಣಿಗಳು ರಾತ್ರಿ ಹೊತ್ತು ಹೊರಗೆ ಬಂದರೆ, ಮಾರ್ಟನ್ ಮಾತ್ರ ಹಗಲು ಹೊತ್ತಿನಲ್ಲೇ ಫುಲ್ ಆ್ಯಕ್ಟೀವ್. ಸೂರ್ಯನ ಬೆಳಕಿನಲ್ಲೇ ಶಿಕಾರಿ ಮಾಡುವುದು ಇದರ ಹ್ಯಾಬಿಟ್.

ಕಣ್ಣಿಗೆ ಕಾಣೋದು ಸಿಕ್ಕಾಪಟ್ಟೆ ರೇರ್

ಇವುಗಳ ಸಂಖ್ಯೆ ಇಡೀ ಪಶ್ಚಿಮ ಘಟ್ಟದಲ್ಲೇ 1000ಕ್ಕಿಂತ ಕಡಿಮೆ ಇದೆ. ಹಾಗಾಗಿ ಇದನ್ನು ಪತ್ತೆ ಮಾಡೋದು ಅಷ್ಟೊಂದು ಸುಲಭ ಅಲ್ಲ, ವನ್ಯಜೀವಿ ಪ್ರೇಮಿಗಳಿಗೆ ಇದು ಕಾಣ ಸಿಕ್ಕರೆ ಅದೇ ಒಂದು ದೊಡ್ಡ ಮಿರಾಕಲ್.

ಒಟ್ಟಿನಲ್ಲಿ ಹೇಳಬೇಕೆಂದರೆ, ಈ ನೀಲಗಿರಿ ಮಾರ್ಟೆನ್ ಅಂದರೆ ನಮ್ಮ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯದ ಅಸಲಿ ರತ್ನ. ಇದು ಕಾಡಲ್ಲಿ ಎಷ್ಟರ ಮಟ್ಟಿಗೆ ಇದೆಯೋ, ಆ ಕಾಡು ಅಷ್ಟೇ ಆರೋಗ್ಯವಾಗಿದೆ ಅಂತ ಅರ್ಥ. ಆದ್ರೆ ಬೇಟೆಯಾಡೋದು ಮತ್ತು ಕಾಡು ನಾಶ ಮಾಡೋದ್ರಿಂದ ಈ ಮುದ್ದಾದ ಪ್ರಾಣಿ ಇವತ್ತು ಅಳಿವಿನ ಅಂಚಿನಲ್ಲಿದೆ.

ಇಂಥಾ ವಿಶಿಷ್ಟ ಜೀವಿಗಳು ನಮ್ಮ ಪಶ್ಚಿಮ ಘಟ್ಟಗಳಲ್ಲಿ ಸುರಕ್ಷಿತವಾಗಿದ್ದರೆ ಮಾತ್ರ ನಮ್ಮ ಪ್ರಕೃತಿಯ ಸೌಂದರ್ಯಕ್ಕೆ ಒಂದು ಬೆಲೆ, ಇಲ್ಲಾಂದ್ರೆ ಎಲ್ಲವೂ ಬರಿ ಫೋಟೋಗೆ ಮಾತ್ರ ಸೀಮಿತ ಆಗಿಬಿಡುತ್ತೆ, ಅಲ್ವಾ?

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !