ಕೇದಾರನಾಥದಲ್ಲಿ ಬಹುನಿರೀಕ್ಷಿತ ರೋಪ್‌ವೇ ಆರಂಭ, ಇದರ ಸ್ಪೆಷಾಲಿಟಿ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಉತ್ತರಾಖಂಡದಲ್ಲಿ 6,811 ಕೋಟಿ ರೂ. ವೆಚ್ಚದಲ್ಲಿ 2 ಹೊಸ ರೋಪ್‌ವೇ ಯೋಜನೆಗಳಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದರಿಂದಾಗಿ  ಸೋನ್‌ಪ್ರಯಾಗ್‌- ಕೇದಾರನಾಥ್‌ ಮತ್ತು ಹೇಮಕುಂಡ್‌ ಸಾಹಿಬ್‌- ಗೋವಿಂದಘಾಟ್‌ ನಡುವೆ ರೋಪ್‌ವೇಗಳು ನಿರ್ಮಾಣಗೊಳ್ಳಲಿವೆ. ಇನ್ನು ನಾಲ್ಕರಿಂದ ಆರು ವರ್ಷದೊಳಗೆ ಈ ವ್ಯವಸ್ಥೆ ಜನರ ಕೈ ಸೇರಲಿದೆ.

ಸೋನ್‌ಪ್ರಯಾಗ್-ಕೇದಾರನಾಥ್ 12.9 ಕಿ.ಮೀ.ವರೆಗಿನ ಮತ್ತು ಹೇಮಕುಂಡ್ ಸಾಹಿಬ್-ಗೋವಿಂದಘಾಟ್ 12.4 ಕಿ.ಮೀ. ನಡುವೆ ರೋಪ್‌ವೇ ನಿರ್ಮಾಣವಾಗಲಿದೆ. ಈ ದಾರಿಯಲ್ಲಿ ಪ್ರಯಾಣಿಸಲು ಬರೋಬ್ಬರಿ ಎಂಟು ಗಂಟೆ ಬೇಕಾಗಿತ್ತು. ಆದರೆ ರೋಪ್‌ವೇ ನಿರ್ಮಾಣದಿಂದಾಗಿ ಈ ಅವಧಿ ಕೇವಲ 40 ನಿಮಿಷಕ್ಕೆ ಇಳಿಯಲಿದೆ.

ಈ ರೋಪ್‌ವೇ ಸ್ಪೆಷಾಲಿಟಿ ಏನು?

ಕೇದಾರನಾಥ್‌ನಿಂದ ಸೋನ್‌ಪ್ರಯಾಗ್‌ ನಡುವಿನ ರೋಪ್‌ವೇ ಅನ್ನು 4,081 ಕೋಟಿ ರೂ. ವೆಚ್ಚದಲ್ಲಿ, ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಅತ್ಯಾಧುನಿಕ ಟ್ರೈಕೇಬಲ್‌ ಡಿಟ್ಯಾಚೇಬಲ್‌ ಗೊಂಡೋಲ ತಂತ್ರಜ್ಞಾನ ಬಳಸಿ ಇದರ ನಿರ್ಮಾಣವಾಗುತ್ತದೆ.

ಪ್ರತಿ ಗಂಟೆಗೆ 1800 ಪ್ರಯಾಣಿಕರು, ಪ್ರತಿ ದಿನ ಸುಮಾರು 18,000 ಪ್ರಯಾಣಿಕರನ್ನು ಈ ಕೇಬಲ್‌ ಕಾರ್ ಹೊತ್ತೊಯ್ಯಲಿದೆ. ಹೇಮಕುಂಡ್‌ ಸಾಹಿಬ್‌ ಜಿ ಮತ್ತು ಗೋವಿಂದಘಾಟ್‌ ನಡುವಿನ ರೋಪ್‌ವೇ 2,730 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಇದು ಭಾರತದ ಅತಿಉದ್ದದ ರೋಪ್ ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ರೋಪ್‌ವೇ 10 ಆಸನಗಳ ಕ್ಯಾಬಿನ್‌ಗಳನ್ನು ಒಳಗೊಂಡಿರುತ್ತದೆ. ಎಲ್ಲಾ ಕ್ಯಾಬಿನ್‌ಗಳನ್ನು ಮುಚ್ಚಿರುತ್ತದೆ. ಸ್ವಯಂಚಾಲಿತ ತೆರೆಯುವ ಮತ್ತು ಮುಚ್ಚುವ ಬಾಗಿಲುಗಳನ್ನು ಹೊಂದಿರುತ್ತದೆ.

ಒಂದು ಗಂಟೆಯಲ್ಲಿ 1,800 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಈ ರೋಪ್‌ವೇ ವರ್ಷವಿಡೀ ಕಾರ್ಯನಿರ್ವಹಿಸುತ್ತದೆ. ಮಳೆಗಾಲ, ಬೇಸಿಗೆ ಕಾಲದ ಸಮಯದಲ್ಲೂ ಕಾರ್ಯನಿರ್ವಹಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!